ಬೆಂಗಳೂರು: ವೀರಶೈವ ಲಿಂಗಾಯತರಿಗೆ ಒಬಿಸಿ ಮೀಸಲಾತಿ ನೀಡುವ ವಿಚಾರಕ್ಕೆ ಬ್ರೇಕ್ ಹಾಕಿರುವ ಹೈ ಕಮಾಂಡ್, ಸಂಪುಟ ವಿಸ್ತರಣೆಗೆ ‘ಗ್ರೀನ್ ಸಿಗ್ನಲ್’ ನೀಡಿದೆ
ಹೌದು! ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಡಿಸೆಂಬರ್ ಎರಡನೇ ವಾರದಲ್ಲಿ ಸಿಎಂ ಹುದ್ದೆಯಿಂದ ಕೆಳಗೆ ಇಳಿಸಲು ಹೈಕಮಾಂಡ್ ಸೂಚಿಸಿದೆ ಎಂಬ ಊಹಾಪೋಹದ ಸುದ್ದಿಗಳು ಬಿಜೆಪಿಯಲ್ಲಿ ಹರಿದಾಡುತ್ತಿದ್ದು, ಅದಕ್ಕೆ ಪೂರಕ ಎಂಬಂತೆ ಬಿಎಸ್‌ವೈ ಅವರೂ ಒಂದಾದ ಮೇಲೊಂದರಂತೆ ದಿಢೀರ್ ನಿರ್ಧಾರಗಳನ್ನು ಕೈಗೊಂಡು ರಾಜಕೀಯ ದಾಳ ಉರುಳಿಸುತ್ತಿದ್ದಾರೆ.
ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಎಲ್ಲರ ಚಿತ್ತ ಇದೀಗ ಮುಖ್ಯಮಂತ್ರಿ ಅವರತ್ತ ನೆಟ್ಟಿದೆ. ಇದು ರಾಜಕೀಯವಾಗಿ ಭಾರಿ ಕುತೂಹಲವನ್ನೂ ಕೆರಳಿಸಿದೆ. ಇನ್ನು ನಿಗಮ-ಮಂಡಳಿಗಳಿಗೆ ನೇಮಕ, ಸಂಪನ್ಮೂಲ ಬಿಡುಗಡೆಗಾಗಿ ಆರ್ಥಿಕ ಇಲಾಖೆಗೆ ಸೂಚನೆ, ಸಾಲು ಸಾಲು ನಿಗಮಗಳ ರಚನೆ ಮಾಡುವ ಮೂಲಕ ವರಿಷ್ಠರಿಗೆ ಸೆಡ್ಡು ಹೊಡೆಯುವ ಪ್ರಯತ್ನ ಮಾಡಿದ್ದರು ಬಿಎಸ್‌ವೈ. ಲಿಂಗಾಯಿತ ಮತ್ತು ವೀರಶೈವ ಸಮುದಾಯಕ್ಕೆ ಮೀಸಲಾತಿ ಪ್ರಕಟಿಸಲು ಮುಂದಾಗಿದ್ದರು. ಈ ಬೆಳವಣಿಗೆ ಕಂಡು ದಂಗಾದ ಹೈಕಮಾಂಡ್ ದೂರವಾಣಿ ಕರೆ ಮಾಡಿ ಯಡಿಯೂರಪ್ಪ ಅವರ ವೇಗಕ್ಕೆ ತಡೆ ನೀಡಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಯಡಿಯೂರಪ್ಪ ಅವರಿಗೆ ಇಂದು ಬೆಳಗ್ಗೆ ಕರೆ ಮಾಡಿ ರಾಜಕೀಯ ತೀರ್ಮಾನಗಳಿಗೆ ನಿಯಂತ್ರಣ ಹೇರಿಕೊಳ್ಳುವಂತೆ ಸೂಚಿಸಿದ್ದಾರೆ. ಹೀಗಾಗಿ ಸಚಿವ ಸಂಪುಟ ಸಭೆಯ ನಂತರ ಬಿಎಸ್‌ವೈ ನಡೆಸಲು ಉದ್ದೇಶಿಸಿದ್ದ ಮಹತ್ವದ ತುರ್ತು ಸುದ್ದಿಗೋಷ್ಠಿ ರದ್ದು ಮಾಡಿದ್ದಾರೆ. ಜತೆಗೆ ಸಂಪುಟ ಸಭೆಯಲ್ಲಿ ಲಿಂಗಾಯಿತ ಮತ್ತು ವೀರಶೈವ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ಮಹತ್ವದ ನಿರ್ಣಯ ಕೈಗೊಳ್ಳುವುದನ್ನು ಮುಂದೂಡಿದ್ದಾರೆ.
ಸಿಎಂ ಯೂಟರ್ನ್ ಹೊಡೆದಿದ್ಯಾಕೆ?
ವೀರಶೈವ ಲಿಂಗಾಯತರನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲು ಯಡಿಯೂರಪ್ಪ ನಿರ್ಧಾರ ಮಾಡಿದ್ದರು. ಅದರಂತೆ ಸಮುದಾಯವನ್ನು ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿ ಸೇರಿಸಲು ಶಿಫಾರಸು ಮಾಡುವ ಕುರಿತು ಕ್ಯಾಬಿನೆಟ್ ಅಜೆಂಡಾದ ಕೊನೆಯ 27ನೇ ವಿಷಯವಾಗಿ ಸೇರಿಸಲಾಗುತ್ತು. ಆದರೆ ಕೊನೆ ಘಳಿಗೆಯಲ್ಲಿ ಮುಖ್ಯಮಂತ್ರಿ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಆ ವಿಷಯವನ್ನು ಸಂಪುಟದಲ್ಲಿ ಚರ್ಚೆ ಮಾಡದೆ ತಡೆಹಿಡಿಯಲಾಗಿದೆ. ಇದಕ್ಕೆ ಕಾರಣವಾಗಿದ್ದು ಅಮಿತ್ ಶಾ ಅವರ ದೂರವಾಣಿ ಕರೆ ಎಂದು ಹೇಳಲಾಗುತ್ತಿದೆ.