NEWSಕೃಷಿನಮ್ಮರಾಜ್ಯರಾಜಕೀಯ

ಗೋ ಹತ್ಯೆ ತಡೆಯುವ ಪ್ರಯತ್ನದಲ್ಲಿ ರೈತರ ಶೋಷಿಸುವ ವ್ಯವಸ್ಥೆ: ಎಚ್‌ಡಿಕೆ ಆಕ್ರೋಶ

ಗೋವುಗಳು ಹೇಗೆ ನಮಗೆ ಪೂಜನೀಯವೋ, ರೈತನೂ ಪೂಜನೀಯವೇ ಅಲ್ಲವೇ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಗೋಹತ್ಯೆ ನಿಷೇಧ ಕಾಯ್ದೆಯಲ್ಲಿ ಕಾಂಗ್ರೆಸ್‌-ಬಿಜೆಪಿಗೆ ಮತಬ್ಯಾಂಕ್‌ನದ್ದೇ ಆದ್ಯತೆ. ಆದರೆ, ಹಾಲು ಉತ್ಪಾದನೆಯಲ್ಲಿ ತೊಡಗಿರುವ 24 ಲಕ್ಷ ರೈತ ಕುಟುಂಬಗಳಿಗೆ ಕಾಯ್ದೆ ಬಗ್ಗೆ ಇರಬಹುದಾದ ಆತಂಕಗಳನ್ನು ಜೆಡಿಎಸ್‌ ವಿಮರ್ಶಿಸಲು ಬಯಸುತ್ತದೆ. ಈ ಹಿಂದೆಯೇ ಹೇಳಿದಂತೆ ಜೆಡಿಎಸ್‌ ಒಂದು ಪಕ್ಷವಾಗಿ ಮಾತ್ರವಲ್ಲ, ರೈತ ಸಂಘವಾಗಿ ಕೆಲಸ ಮಾಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಸರ್ಕಾರ ಗೋಹತ್ಯೆ ನಿಷೇಧಿಸುವ ಕಾಯ್ದೆ ರೂಪಿಸಿದೆ. ಆದರೆ, ಗೋಹತ್ಯೆ ನಿಷೇಧದ ಜೊತೆಗೆ ಗೋಮಾತೆಯನ್ನು ರಕ್ಷಿಸುವ, ಗೋಮಾತೆಯನ್ನೇ ನಂಬಿದ ರೈತರನ್ನು ರಕ್ಷಿಸುವ ಕಾನೂನಾಗಿಯೂ ಇವತ್ತಿನ ಈ ಕಾಯ್ದೆ ವರ್ತಿಸಬೇಕು ಎಂಬುದು ರೈತರ ಪ್ರತಿನಿಧಿಯಾದ ಜೆಡಿಎಸ್‌ನ ಒತ್ತಾಯವಾಗಿದೆ ಎಂದು ಸರಣಿ ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ನಾವೆಲ್ಲರೂ ಹಸುಗಳನ್ನು ಪೂಜಿಸುತ್ತೇವೆ. ಆದರೆ, ರೈತ ಮಾತ್ರ ಅದನ್ನು ಪೋಷಿಸುವ ಹೊಣೆ ಹೊತ್ತಿದ್ದಾನೆ. ಮತ್ತು ಅದರ ಮೇಲೆಯೇ ಅವನ ಜೀವನ ನಿರ್ವಹಣೆಯೂ ಅವಲಂಬಿತವಾಗಿದೆ. ಗೋವಿನ ಪೋಷಣೆ ಎಂಬುದೇ ಆರ್ಥಿಕ ಹೊರೆಗೆ ಕಾರಣವಾದರೆ, ಆತನ ನೆರವಿಗೆ ನಿಲ್ಲುವವರು ಯಾರು? ಇದು ಸಾಮಾನ್ಯ ರೈತನಿಗೆ ಇರುವ ಪ್ರಶ್ನೆ. ಸರ್ಕಾರ ಇದಕ್ಕೆ ಪರಿಹಾರ ಹುಡುಕಬೇಕು ಎಂದು ಆಗ್ರಹಿಸಿದ್ದಾರೆ.

ಸದ್ಯ ಸರ್ಕಾರ ತಂದಿರುವ ಕಾಯ್ದೆಯು ರೈತರು ಗಂಡು ಕರುಗಳನ್ನು, ವಯಸ್ಸಾದ ರಾಸುಗಳನ್ನು, ರೋಗಕ್ಕೀಡಾದ ಹಸುಗಳನ್ನು ಪೋಷಿಸಲೇಬೇಕಾದ ಷರತ್ತಿಗೆ ದೂಡುತ್ತದೆ. ಪ್ರಾಯೋಗಿಕವಲ್ಲದ ಷರತ್ತುಗಳ ಮೂಲಕ ಸರ್ಕಾರ ರೈತರ ಮೇಲೆ ಹೆಚ್ಚಿನ ಒತ್ತಡ ಹೇರಲು ಪ್ರಯತ್ನಿಸಿದರೆ, ರೈತರು ಹೈನುಗಾರಿಕೆಯಿಂದ ದೂರ ಸರಿಯಬಹುದು. ಆಗ ಹಾಲು ಉತ್ಪಾದನೆಗೆ ಹೊಡೆತ ಬೀಳಲಿದೆ ಎಂದು ಎಚ್ಚರಿಸಿದ್ದಾರೆ.

ಜಾನುವಾರುಗಳನ್ನು ಸೂಕ್ತ ಪ್ರಾಧಿಕಾರದ ಪರವಾನಗಿ ಪಡೆದು ವಧೆ ಮಾಡಬಹುದು. ಇದಕ್ಕೆ ಪಶು ವೈದ್ಯಾಧಿಕಾರಿಯ ಪ್ರಮಾಣ ಪತ್ರ ಬೇಕು ಎಂದು ಹೇಳಲಾಗಿದೆ. ಚಿಕಿತ್ಸೆಗೇ ಈಗ ಪಶುವೈದ್ಯರ ಲಭ್ಯತೆ ಇಲ್ಲ. ಇನ್ನು ಪ್ರಮಾಣ ಪತ್ರಕ್ಕೆ ಲಭ್ಯರಾಗುವರೇ? ಪ್ರಮಾಣ ಪತ್ರ, ಅನುಮತಿ ಪಡೆಯುವ ಪ್ರಕ್ರಿಯೆ ದಂಧೆಯ ರೂಪ ತಾಳದೇ? ರೈತರ ಶೋಷಣೆ ನಡೆಯುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಪೊಲೀಸರು, ಅಧಿಕಾರಿಗಳಿಗೆ ರೈತರ ಡೈರಿ ಪರಿಶೀಲನೆಯ ಅವಕಾಶ ನೀಡಲಾಗಿದೆ. ಇದರಿಂದ ಅಧಿಕಾರಿಗಳು ರೈತರಿಗೆ ಕಿರುಕುಳ ನೀಡುವ ಸಾಧ್ಯತೆಗಳು ಸೃಷ್ಟಿಯಾಗುವ ಆತಂಕವಿದೆ. ರೈತರಲ್ಲಿ ಭಯದ ವಾತಾವರಣವೂ ಮೂಡುತ್ತದೆ. ಈ ನಿಯಮವನ್ನು ರಾಜಕೀಯವಾಗಿ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ. ಇದು ಹಳ್ಳಿಗಳ ಸೌಹಾರ್ದ ವಾತಾವರಣವನ್ನೇ ಹಾಳುಮಾಡಬಹುದಲ್ಲವೇ?

ಜಾನುವಾರುಗಳನ್ನು ಸಾಗಿಸಲು ಪಶುಸಂಗೋಪನಾ ಇಲಾಖೆಯ ಅನುಮತಿ ಪಡೆಯಬೇಕು ಎಂದು ಹೇಳಲಾಗಿದೆ. ಇದು ಮುಂದೊಂದು ದಿನ ಲೈಸನ್ಸ್‌ ರಾಜ್‌ ಪದ್ಧತಿಗೆ ಕಾರಣವಾಗದೇ? ಅಧಿಕಾರಿಗಳು ಇದರಲ್ಲಿ ಭ್ರಷ್ಟಾಚಾರ ನಡೆಸದೇ ಇರಲಾರರು ಎಂದು ಹೇಳಲು ಸಾಧ್ಯವೇ? ಒಂದು ವೇಳೆ ಇಂಥ ಪರವಾನಗಿಗೆ ರೈತರಿಂದ ಲಂಚ ಪಡೆಯುವ ಪರಿಸ್ಥಿತಿ ಸೃಷ್ಟಿಯಾದರೆ ಅದು ರೈತರ ಶೋಷಣೆಯಾಗದೇ?

ಜಾನುವಾರಿನ ವಧೆಯಾದ ಪ್ರಕರಣದಲ್ಲಿ ಮಾರಾಟ ಮಾಡಿದ ರೈತನನ್ನೂ ಹೊಣೆಗಾರನನ್ನಾಗಿಸುವ ನಿಯಮವಿದೆ. ರೈತ ತಾನು ಮಾರಾಟ ಮಾಡಿದ ಜಾನುವಾರು ವಧಾಸ್ಥಳಕ್ಕೆ ಹೋಗುತ್ತದೆ ಎಂಬುದನ್ನು ಅಂದಾಜಿಸಲು ಹೇಗೆ ಸಾಧ್ಯ? ಈ ನಿಯಮಗಳು ರೈತ ಸರ್ಕಾರ ಕಚೇರಿಗಳಿಗೆ ಅಲೆಯುವಂತೆ ಮಾಡುವುದರಲ್ಲಿ ಅನುಮಾನವಿಲ್ಲ. ಕೊನೆಗೆ ಇದು ಹೈನುಗಾರಿಕೆಗೆ ಪೆಟ್ಟು ಕೊಡುತ್ತದೆ.

ಗೋಹತ್ಯೆ ನಿಷೇಧ ಕಾಯ್ದೆಯು ಗೋವಿನ ಹತ್ಯೆಯನ್ನು ತಡೆಯುವ ಸ್ವರೂಪದ್ದಾಗಿದೆಯಾದರೂ,ರೈತರನ್ನು ಸರ್ಕಾರಿ ಕಚೇರಿಗಳಿಗೆ ಅಲೆದಾಡಿಸುವ ಸಾಕಷ್ಟು ಸನ್ನಿವೇಶಗಳನ್ನೂ ಬಲವಂತವಾಗಿ ಸೃಷ್ಟಿ ಮಾಡುತ್ತಿದೆ ಎಂಬುದನ್ನು ಎಲ್ಲರೂ ಗಮನಿಸಲೇಬೇಕು. ಇದಕ್ಕೆ ಸರ್ಕಾರ ಸೂಕ್ತ ಪರಿಹಾರ, ಮಾರ್ಗೋಪಾಯಗಳನ್ನು ಸೂಚಿಸಬೇಕು. ಇಲ್ಲವಾದರೆ, ಇದು ರೈತ ವಿರೋಧಿಯಾಗಲಿದೆ.

ಗೋವುಗಳು ಹೇಗೆ ನಮಗೆ ಪೂಜನೀಯವೋ, ರೈತನೂ ಪೂಜನೀಯವೇ. ಗೋ ಹತ್ಯೆಯನ್ನು ತಡೆಯುವ ನಮ್ಮ ಪ್ರಯತ್ನದಲ್ಲಿ ರೈತನನ್ನು ಶೋಷಿಸುವ ವ್ಯವಸ್ಥೆಗೆ ದೂಡುವುದು ಯಾವ ನ್ಯಾಯ? ಕಾಯ್ದೆಯು ರೈತನ್ನು ಸಂಕಷ್ಟಕ್ಕೆ ದೂಡಬಾರದು ಎಂಬುದಷ್ಟೇ ನನ್ನ ಆಶಯ. ಜೆಡಿಎಸ್‌ಗೆ ಈ ವಿಚಾರದಲ್ಲಿ ಯಾವ ಮತಬ್ಯಾಂಕ್‌ನ ಓಲೈಕೆಯೂ ಬೇಕಿಲ್ಲ. ರೈತನ ಹಿತ ರಕ್ಷಣೆಯಾದರೆ ಸಾಕು.

ರೈತ ತಾನು ಪೋಷಿಸಿದ ಗೋವನ್ನು ಅಥವಾ ಯಾವುದೇ ಪ್ರಾಣಿಯನ್ನು ವಧೆಗಾಗಿ ಕೊಡಲು ಮನಃಪೂರ್ವಕವಾಗಿ ಒಪ್ಪಲಾರ. ಆದರೆ, ಅದು ಅವನಿಗೆ ಅನಿವಾರ್ಯ.ಗೋಹತ್ಯೆಯನ್ನು ನಿಷೇಧಿಸಬೇಕಿದ್ದರೆ, ಆತನ ಅನಿವಾರ್ಯತೆಯನ್ನು ನಾವು ಹೋಗಲಾಡಿಸಬೇಕು. ರೈತನಿಗೆ ಹೊರೆ ಸೃಷ್ಟಿಸುವ ಜಾನುವಾರುಗಳ ರಕ್ಷಣೆಯನ್ನು ಸರ್ಕಾರವೇ ಮಾಡಲಿ. ಗೋವಿನ ಜೊತೆಗೆ ರೈತನನ್ನೂ ರಕ್ಷಿಸಲಿ ಎಂದು ಸಲಹೆ ನೀಡಿದ್ದಾರೆ.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು