ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಬಿಎಂಟಿಸಿಯ ಬನಶಂಕರಿ ಟಿಟಿಎಂಸಿ ಬಸ್ ನಿಲ್ದಾಣ ಬಳಿ ನಡೆಸುತ್ತಿರುವ ಪ್ರತಿಭಟನೆ ವೇಳೆ ಪೊಲೀಸರು ಮತ್ತು ನೌಕರರ ನಡುವೆ ಮಾತಿನ ಚಕಮಕಿ ನಡೆಯಿತು.
ಬಸ್‌ಗಳನ್ನು ರಸ್ತೆಯಲ್ಲಿ ನಿಲ್ಲಿಸದೆ ನಿಮ್ಮ ಟಿಟಿಎಂಸಿ ಬಸ್ ನಿಲ್ದಾಣಕ್ಕೆ ತೆದುಕೊಂಡು ಹೋಗಿ ಎಂದು ಪೊಲೀಸರು ನೌಕರರ ಮೇಲೆ ಒತ್ತಡ ಏರಿದ್ದರಿಂದ ನಿಲ್ದಾಣದ ಒಳಗೆ ಈಗಾಗಲೇ ಸಾಕಷ್ಟು ಬಸ್‌ಗಳು ನಿಂತಿರುವುದರಿಂದ ಅಲ್ಲಿ ಜಾಗವಿಲ್ಲ. ಹೀಗಾಗಿ ನಾವು ಎಲ್ಲಿ ನಿಲ್ಲಿಸಬೇಕು ನೀವೆ ಹೇಳಿ ಎಂದು ನೌಕರರು ಕೇಳಿದಕ್ಕೆ ಸಿಟ್ಟುಗೊಂಡ ಪೊಲೀಸರು ಇಲ್ಲಿ ನಿಲ್ಲಬೇಡಿ ಇಲ್ಲಾದರೂ ನಿಲ್ಲಿಸಿಕೊಳ್ಳಿ ಎಂದು ಗದರಿದರು. ಇದರಿಂದ ಕುಪಿತಗೊಂಡ ನೌಕರರು ತೀವ್ರ ವಿರೋಧ ನಡೆಸಿದ್ದರಿಂದ ಇಬ್ಬರ ನಡುವೆ ವಾಗ್ವಾದ ನಡೆಯಿತು.
ಇನ್ನು ಯಶವಂತಪುರ ಟಿಟಿಎಂಸಿ ಬಸ್ ನಿಲ್ದಾಣದ ಬಳಿ ನೌಕರರು ಜಮಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದು, ನಮ್ಮ ಬೇಡಿಕೆಗಳು ಈಡೇರುವವರೆಗೂ ಪ್ರತಿಭಟನೆ ಕೈಬಿಡುವ ಮಾತೆ ಇಲ್ಲ ಎಂದು ಹೇಳುತ್ತಿದ್ದಾರೆ.
ಕೆಂಗೇರಿ ಸೇರಿ ಮೈಸೂರು ರಸ್ತೆಯಲ್ಲಿ ಯಾವುದೇ ಬಸ್‌ಗಳ ಸಂಚಾರ ಇಲ್ಲ. ಇನ್ನು ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು, ತುಮಕೂರು, ಚಿಕ್ಕಮಗಳೂರು, ಮಂಗಳೂರು, ಬಳ್ಳಾರಿ, ಕೋಲಾರ, ಚಿಕ್ಕಬಳ್ಳಾಪುರ, ಗದಗ, ಕಲಬುರಗಿ, ಬೆಳಗಾವಿ, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಬಹುತೇಕ ಎಲ್ಲಾ ಜಿಲ್ಲೆಗಳ ಸಾರಿಗೆ ಡಿಪೋಗಳ ನೌಕರರು ಬೀದಿಗಿಳಿದಿರುವುದರಿಂದ ಸಂಚಾರ ಸಂಪೂರ್ಣ ಸ್ತಬ್ಧವಾಗಿದೆ.
ಇದರ ಲಾಭವನ್ನು ಪಡೆದುಕೊಳ್ಳುವಲ್ಲಿ ಕೆಲ ಆಟೋ ಚಾಲಕರು ಪ್ರಯಾಣಿಕರಿಂದ ದುಪ್ಪಟ್ಟು ಸುಲಿಗೆಗೆ ಇಳಿದಿದ್ದಾರೆ.