NEWSನಮ್ಮರಾಜ್ಯ

KSRTC: ಇಂದಿನಿಂದ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ವಿತರಣೆಗೆ ಸರ್ಕಾರದ ಆದೇಶ

ಉಚಿತ ಬಸ್ ಪಾಸ್ ಯೋಜನೆ ಜಾರಿಯಾಗುವುದರಿಂದ ಶುಲ್ಕ ಪಡೆದು ವಿತರಿಸಲಾದ ಪಾಸುಗಳ ಸಂಪೂರ್ಣ ಶುಲ್ಕವನ್ನು 15 ದಿನಗಳೊಳಗಾಗಿ ವಿದ್ಯಾರ್ಥಿಗಳಿಗೆ ಮರುಪಾವತಿಸತಕ್ಕದ್ದು ಎಂಬ ಷರತ್ತುಗಳನ್ನು ಸರ್ಕಾರ ವಿಧಿಸಿದೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಪ್ರಯಾಣಿಸುವ ರಾಜ್ಯದ ಶಾಲಾ ಕಾಲೇಜುಗಳ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್‌ಗಳನ್ನು ವಿತರಿಸಲು ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರ ಆದೇಶ ಹೊರಡಿಸಿದೆ.

ಈ ಸಂಬಂಧ ನಿನ್ನೆ ಜೂನ್‌ 11ರ ಗುರುವಾರ ಕೆಲ ಷರತ್ತುಗಳಿಗೊಳಪಟ್ಟು ಅನುಮೋದನೆ ನೀಡಿ ಸರ್ಕಾರ ಆದೇಶ ಹೊರಡಿಸಿದೆ.

ಷರತ್ತುಗಳು: 1. ರಾಜ್ಯ ರಸ್ತೆ ಸಾರಿಗೆ ನಿಗಮ / ಸಂಸ್ಥೆಗಳು ವಿದ್ಯಾರ್ಥಿ ಬಸ್ ಪಾಸ್ ವಿತರಣೆಯಲ್ಲಿ ಹಾಲಿ ಅನುಸರಿಸುತ್ತಿರುವ ನಿಯಮಾವಳಿಗಳನ್ನು (ವಿದ್ಯಾರ್ಥಿ ಪಾಸಿಗಾಗಿ ಶೈಕ್ಷಣಿಕ ವಿದ್ಯಾಭ್ಯಾಸದ ಅರ್ಹತಾ ಮಾನದಂಡಗಳು, ದೂರದ ಮಿತಿ, ಪಾಸಿನ ಕಾಲಾವಧಿ ಇತ್ಯಾದಿ) ಅನುಸರಿಸತಕ್ಕದ್ದು;

2. ವಿದ್ಯಾರ್ಥಿಗಳು ಕರ್ನಾಟಕ ಸರ್ಕಾರದ ಸೇವಾ ಸಿಂಧು ಪೋರ್ಟಲ್‌ನಲ್ಲಿ ಶಾಲೆಗಳು ಸೇರಿದಂತೆ ಎಲ್ಲಿಂದಲಾದರೂ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

3. ಈಗಾಗಲೇ ವಿತರಿಸಲಾಗಿರುವ ಬಸ್ ಪಾಸ್‌ಗಳು ಯಥಾವತ್ತಾಗಿ ಚಾಲ್ತಿಯಲ್ಲಿರುತ್ತವೆ. ಆದಾಗ್ಯೂ ವಿದ್ಯಾರ್ಥಿಗಳು ಪಾವತಿಸಿರುವ ಮೊತ್ತವನ್ನು ಹಿಂತಿರುಗಿಸಲಾಗುವುದು.

4. ರಾಜ್ಯದಲ್ಲಿ ವಾಸವಿದ್ದು, ನೆರೆರಾಜ್ಯಗಳಲ್ಲಿನ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ನೆರೆರಾಜ್ಯಗಳಲ್ಲಿ (ರಾಜ್ಯದ ಗಡಿಭಾಗದಲ್ಲಿ) ವಾಸವಿದ್ದು, ರಾಜ್ಯದೊಳಗಿನ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡಲಾಗುವುದು.

5. ಉಚಿತ ಬಸ್ ಪಾಸ್ ಯೋಜನೆ ಜಾರಿಯಾಗುವುದರಿಂದ ಶುಲ್ಕ ಪಡೆದು ವಿತರಿಸಲಾದ ಪಾಸುಗಳ ಸಂಪೂರ್ಣ ಶುಲ್ಕವನ್ನು 15 ದಿನಗಳೊಳಗಾಗಿ ವಿದ್ಯಾರ್ಥಿಗಳಿಗೆ ಮರುಪಾವತಿಸತಕ್ಕದ್ದು ಎಂಬ ಷರತ್ತುಗಳನ್ನು ಸರ್ಕಾರ ವಿಧಿಸಿ ಆದೇಶಿಸಿದೆ.

ಇನ್ನು ಈ ಆದೇಶವನ್ನು ಸಚಿವ ಸಂಪುಟದ 03.06.2025ರನ್ವಯ ಹೊರಡಿಸಲಾಗಿದೆ ಎಂದು ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಪುಷ್ಪ ತಿಳಿಸಿದ್ದಾರೆ.

ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಪ್ರಯಾಣಿಸುವ ರಾಜ್ಯದ ಶಾಲಾ ಕಾಲೇಜುಗಳಲ್ಲಿನ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ವಿಸ್ತರಿಸಲು ಜೂನ್‌ 3ರಂದು ಸಚಿವ ಸಂಪುಟದ ಅನುಮೋದನೆಯನ್ವಯ ತಾತ್ವಿಕ ಅನುಮೋದನೆ ನೀಡಿ ಆದೇಶಿಸಿತ್ತು.

ಇನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಪ್ರಸ್ತಾವನೆ ಸಲ್ಲಿಸುತ್ತಾ, ಈವರೆಗೂ ಪ್ರಸ್ತುತ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಹಾಲಿ ಇರುವ ನಿಯಮಾವಳಿಗಳನ್ನು ಅನುಸರಿಸಿ ಸೇವಾಸಿಂಧು ತಂತ್ರಾಂಶದ ಮುಖೇನ ಅರ್ಜಿಗಳನ್ನು ಆಹ್ವಾನಿಸಿ ರಿಯಾಯಿತಿ ದರದಲ್ಲಿ ಬಸ್ ಪಾಸುಗಳನ್ನು ವಿತರಿಸಲಾಗುತ್ತಿದ್ದು, ಪ್ರಸ್ತುತ, ಚಾಲ್ತಿಯಲ್ಲಿರುವ ನಿಯಮಾವಳಿಗಳನ್ನಯ ಸಾಮಾನ್ಯ ವಿದ್ಯಾರ್ಥಿ ಪಾಸುಗಳ ಒಟ್ಟಾರೆ ವೆಚ್ಚದಲ್ಲಿ ಶೇ.50 ರಷ್ಟು ಸರ್ಕಾರ, ಶೇ.25 ರಷ್ಟು ನಿಗಮಗಳು ಹಾಗೂ ಶೇ.25 ರಷ್ಯನ್ನು ಫಲಾನುಭವಿಗಳು ಭರಿಸಲು ಕ್ರಮವಹಿಸಲಾಗುತ್ತಿತ್ತು.

ಆದರೆ ಜೂನ್‌ 3ರಂದು ಸರ್ಕಾರ ಹೊರಡಿಸಿರುವ ಆದೇಶದನ್ವಯ ರಾಜ್ಯದ ಎಲ್ಲ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸಿದಲ್ಲಿ ತಗಲುವ ಅಂದಾಜು ವೆಚ್ಚ 286.08 ಕೋಟಿ ರೂ.ಗಳನ್ನು ಮತ್ತು ಪ್ರತಿ ಬಸ್ ಪಾಸ್‌ನ ಸಂಸ್ಕರಣಾ ಶುಲ್ಕ 100 ರೂ. ಹಾಗೂ ಅಪಘಾತ ಪರಿಹಾರ ನಿಧಿ 50 ರೂ.ರಂತೆ (ಪ್ರತಿ ತಿಂಗಳಿಗೆ 5 ರೂ.ರಂತೆ) ಒಟ್ಟು ಅಂದಾಜು ವೆಚ್ಚ 15 ಕೋಟಿ ರೂ.ಗಳನ್ನು ಸರ್ಕಾರದಿಂದ ನಾಲ್ಲೂ ರಸ್ತೆ ನಿಗಮಗಳಿಗೆ ಭರಿಸಬೇಕು,

ಅಲ್ಲದೆ ಈಗಾಗಲೇ 2026-27ನೇ ಶೈಕ್ಷಣಿಕ ಸಾಲಿಗೆ 30.05.2026 ರಿಂದ 09.06.2026ರವರೆಗೆ ನಾಲ್ಕೂ ನಿಗಮಗಳಿಂದ ಒಟ್ಟಾರೆ 19,792 ರಿಯಾಯಿತಿ ದರದಲ್ಲಿ ಪಾಸುಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಗಿದ್ದು, ಉಚಿತ ಬಸ್ ಪಾಸ್ ವ್ಯವಸ್ಥೆ ಜಾರಿಯಾಗುವವರೆಗೆ ವಿತರಿಸಲಾದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಪಾಸಿನ ಮೊತ್ತವನ್ನು ವಿದ್ಯಾರ್ಥಿಗಳಿಗೆ ಮರುಪಾವತಿಸಲು ಅನುಮೋದನೆ ನೀಡುವಂತೆ ಕೋರಿದ್ದರು.

ಈ ಎಲ್ಲವನ್ನು ಮನಗಂಡ ಸರ್ಕಾರ ಈ ಐದು ಷರತ್ತುಗಳನ್ನು ಒಳಗೊಂಡ ಆದೇಶವನ್ನು ಹೊರಡಿಸಿದ್ದು, ಎಲ್ಲ ವಿದ್ಯಾರ್ಥಿಗಳು ಉಚಿತವಾಗಿ ಪ್ರಯಾಣಿಸಲು ತಕ್ಷಣ ಪಾಸ್‌ಗಳ ವಿತರಣೆ ಮಾಡುವುದಕ್ಕೆ ಆದೇಶ ಹೊರಡಿಸಿದೆ.

Deva
the authorDeva

Leave a Reply

error: Content is protected !!
Latest news
ನ್ಯಾಯಾಲಯದ ಆದೇಶ ಪಾಲಿಸದ KKRTC: ಮೃತರ ಕುಟುಂಬಕ್ಕೆ 36 ಲಕ್ಷ ರೂ. ಪರಿಹಾರ ನೀಡದಕ್ಕೆ ಔರಾದ್ ಘಟಕದ 2ಬಸ್‌ಗಳ ಜಪ್ತಿ ಸರ್ಕಾರದಿಂದ ಹೊರಬಿತ್ತು ಮಹತ್ವದ ಆದೇಶ: ಇನ್ನುಮುಂದೆ ಸರ್ಕಾರಿ ಪುರುಷ ನೌಕರರು ಪಡೆಯಬಹುದು 6ತಿಂಗಳ ಶಿಶುಪಾಲನಾ ರಜೆ KSRTC: ಇಂದಿನಿಂದ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ವಿತರಣೆಗೆ ಸರ್ಕಾರದ ಆದೇಶ ಬಿಡದಿ ಟೌನ್ ಶಿಪ್‌: ರೈತರ ವಿರೋಧದ ನಡುವೆಯೂ ಎಕರೆಗೆ 2.14 ಕೋಟಿ ರೂ. ದರ ನಿಗದಿ- ಭೂಸ್ವಾಧೀನಕ್ಕೆ ಮುಂದಾದ ಸರ್ಕಾರ ಕರೆಂಟ್‌ ಬಿಲ್‌: ವಿದ್ಯುತ್ ವಿತರಣಾ ಕಂಪನಿಗಳ ಅನ್ಯಾಯದ ಬಿಲ್ಲಿಂಗ್ ಪದ್ಧತಿಗೆ ಬ್ರೇಕ್‌- KERC ಆದೇಶ ಪಾಲನೆಗೆ ಗ್ರಾಹಕರ... ಗೃಹಲಕ್ಷ್ಮಿಯೋಜನೆಗೆ ಮತ್ತೆ ಹೊಸದಾಗಿ ಅರ್ಜಿ ಸ್ವೀಕರಿಸುವ ಚಿಂತನೆಯಲ್ಲಿ ಸರ್ಕಾರ! ಮೂರು ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ‘ಶಕ್ತಿ ಸ್ಮಾರ್ಟ್ ಕಾರ್ಡ್’ ವಿತರಿಸಲು ಸರ್ಕಾರ ನಿರ್ಧಾರ: ಸಾರಿಗೆ ಸಚಿವ ಬೈರತಿ ... ಹಣ ದುರುಪಯೋಗ, ಕರ್ತವ್ಯ ಲೋಪ ಎಸಗಿದ ಆರೋಪ ಸಾಬೀತು: ಮಹೇಶ್ ಜೋಶಿ ಕಸಾಪ ಆಜೀವ ಸದಸ್ಯತ್ವ ರದ್ದು ಮುಖ್ಯ ಶಿಕ್ಷಕರ ಕಿರುಕುಳಕ್ಕೆ ಬೇಸತು 10ನೇ ತರಗತಿ ವಿದ್ಯಾರ್ಥಿ ಶಾಲಾ ಕಟ್ಟಡದಿಂದ ಜಿಗಿದು ಆತ್ಮಹತ್ಯೆ KSRTC ಎಂಡಿ ಅಕ್ರಮ್‌ಪಾಷ ವರ್ಗಾವಣೆ ಪ್ರಭಾರ ಎಂಡಿಯಾಗಿ ಡಾ.ಆರ್‌. ಸೆಲ್ವಮಣಿ ನೇಮಕ ಮಾಡಿ ಸರ್ಕಾರದ ಆದೇಶ