ಬೆಂಗಳೂರು: ಸರ್ಕಾರದ ಉಡಾಫೆಯಿಂದ ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾದರ ಎಂಬ ಆರೋಪ ಈಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಹೌದು! ಸರ್ಕಾರ ನಿನ್ನೆ ವಿಧಾನಸೌಧ ಚಲೋ ಹಮ್ಮಿಕೊಂಡು ಹೋರಾಟ ಮಾಡುತ್ತಿದ್ದ ಫ್ರೀಡಂ ಪಾರ್ಕ್‌ಗೆ ಯಾವೊಬ್ಬ ಸಚಿವರು ಬಾರದ ಹಿನ್ನೆಲೆಯಲ್ಲಿ ಮತ್ತು ಪ್ರತಿಭಟನಾ ನಿರತರ ಮೇಲೆ ಪೊಲೀಸರನ್ನು ಬಿಟ್ಟು ದಬ್ಬಾಳಿಕೆ ನಡೆಸಿದ್ದರಿಂದ ಕೋಪಗೊಂಡು ನೌಕರರು ಇಂದು ಹೋರಾಟಕ್ಕೆ ಇಳಿದಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನೊಂದೆಡೆ ಸಾರಿಗೆ ನೌಕರರ ಮುಷ್ಕರಕ್ಕೆ ರೈತ ಮುಖಂಡ ಬಂದು ಕರೆ ನೀಡುವುದು ತಪ್ಪ ಎಂಬ ರೀತಿಯಲ್ಲಿ ಕೆಲ ಮಾಧ್ಯಮಗಳು ವರದಿ ಮಾಡುತ್ತಿವೆ. ಇದನ್ನು ನೋಡಿದರೆ ನಮಗೆ ಹಾಸ್ಯಸ್ಪದ ಎನಿಸುತ್ತಿದೆ ಎಂದು ಪ್ರತಿಭಟನಾ ನಿರತ ಸಾರಿಗೆ ನೌಕರರು ಹೇಳುತ್ತಿದ್ದಾರೆ.
ಅಂದರೆ, ನಮ್ಮ ಹೋರಾಟಕ್ಕೆ ರೈತ ಮುಖಂಡರು ಬಂದಿದ್ದಾರೆ, ಅವರ ಬೆಂಬಲದೊಂದಿಗೆ ನಾವು ಹೋರಾಟಕ್ಕೆ ಇಳಿದಿದ್ದೇವೆ. ಇದಕ್ಕೆ ಕಾರಣ ನಮ್ಮ ಸಂಘಟನೆಗಳ ಮುಖಂಡರು ನಮ್ಮ ಸಮಸ್ಯೆಗೆ ಸ್ಪಂದಿಸದಿರುವುದು. ಅವರು ನಮ್ಮ ಸಮಸ್ಯೆ ಆಲಿಸಿದ್ದರೆ ನಾವು ಯಾಕೆ ಬೇರೊಬ್ಬ ನಾಯಕರ ಕಾಲಿಗೆ ಬೀಳಬೇಕಾಯಿತು ಎಂದು ಸಾರಿಗೆ ಸಂಘಟನೆಗಳ ವಿರುದ್ಧ ನೌಕರರೇ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.
ಇನ್ನು ನಮ್ಮ ವಿರುದ್ಧ ಮತ್ತು ಸರ್ಕಾರ ಪರವಿರುವ ಸಂಘಟನೆಗಳೊಂದಿಗೆ ಸಭೆ ನಡೆಸಿದರೆ ನಾವು ಪ್ರತಿಭಟನೆಯನ್ನು ಯಾವುದೇ ಕಾರಣಕ್ಕೂ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.