ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ನಟಿ ಸಂಜನಾ ಗಲ್ರಾನಿಗೆ ಹೈಕೋರ್ಟ್ ಏಕ ಸದಸ್ಯ ಪೀಠ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಅನಾರೋಗ್ಯ ಹಿನ್ನೆಲೆ ತಮಗೆ ಜಾಮೀನು ನೀಡಬೇಕೆಂದು ನಟಿ ಸಂಜನಾ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಶ್ರೀನಿವಾಸ್ ಹರೀಶ್ ಕುಮಾರ್ ಅರವರಿದ್ದ ಪೀಠ, ವೈದ್ಯಕೀಯ ತಪಾಸಣೆಗೆ ನಡೆಸಿ, ಡಿಸೆಂಬರ್ 10ರೊಳಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿತ್ತು. ಇದೀಗ ವೈದ್ಯಕೀಯ ವರದಿ ಆಧರಿಸಿ ಸಂಜನಾಗೆ ನ್ಯಾಯಾಲಯ ಜಾಮೀನು ಸಿಕ್ಕಿದೆ.
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 8 ರಂದು ಸಂಜನಾ ಮನೆ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು ವಿಚಾರಣೆಗೆ ಕರೆದು, ನಂತರ ಬಂಧಿಸಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ದ್ವಿವೇದಿಯ ಬಂಧನವಾದ ಕೆಲವು ದಿನಗಳ ಬಳಿಕ ನಟಿ ಸಂಜನಾ ಬಂಧನವಾಗಿತ್ತು. ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಳೆದ ಮೂರು ತಿಂಗಳಿಂದ ನ್ಯಾಯಾಂಗ ಬಂಧದಲ್ಲಿದ್ದ ಸಂಜನಾಗೆ ಇದೀಗ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಆದರೆ, ಡ್ರಗ್ಸ್ ಪ್ರಕರಣದಲ್ಲಿ ಸಂಜನಾ ಗಿಂತಲೂ ಕೆಲ ದಿನ ಮುಂಚೆ ಬಂಧನಕ್ಕೆ ಒಳಗಾಗಿದ್ದ ನಟಿ ರಾಗಿಣಿ ದ್ವಿವೇದಿಗೆ ಈ ವರೆಗೆ ಜಾಮೀನು ದೊರೆತಿಲ್ಲ. ಜಾಮೀನು ಕೋರಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಜಾಮೀನು ಅರ್ಜಿ ವಿಚಾರಣೆಯನ್ನು ವಜಾಗೊಳಿಸಿರುವ ಸುಪ್ರೀಂ ಕೋರ್ಟ್ ವಿಚಾರಣೆಯನ್ನ ಜನವರಿ ಮೊದಲ ವಾರಕ್ಕೆ ಮುಂದೂಡಿದೆ.