ಬೆಂಗಳೂರು: ಡಿಸೆಂಬರ್ ತಿಂಗಳು ಅರ್ಧ ಕಳೆದಿದೆ. ಆದರೆ, ಸಾರಿಗೆ ನೌಕರರಿಗೆ ಮಾತ್ರ ಇನ್ನೂ ನವೆಂಬರ್ ವೇತನವೇ ಕೈಸೇರಿಲ್ಲ. ಇದರಿಂದ ಮನೆ ಬಾಡಿಗೆ, ಇಎಂಐ ಸೇರಿ ವಿವಿಧ ಆರ್ಥಿಕ ಹೊಣೆಗಾರಿಕೆ ನಿಭಾಯಿಸಲು ಸಾಧ್ಯವಾಗುತ್ತಿಲ್ಲ.
ಇಷ್ಟಾದರೂ ರಾಜ್ಯ ಸರ್ಕಾರ ಮಾತ್ರ ಸಾರಿಗೆ ನೌಕರರ ಬೇಡಿಕೆಗಳಿಗೆ ಸ್ಪಂದಿಸುವ ಮನಸ್ಸು ಮಾಡಿಲ್ಲ. ಇದರಿಂದ ಬೇಸತ್ತು ನೌಕರರು ಮುಷ್ಕರಕ್ಕೆ ಮುಂದಾಗಿದ್ದಾರೆ. ಜನಸಾಮಾನ್ಯರ ಪ್ರಯಾಣಕ್ಕೆ ಸಾರಿಗೆ ಸಂಸ್ಥೆ ಬಸ್ ಗಳೇ ಪ್ರಮುಖವಾಗಿವೆ. ಆದರೆ, ಇದನ್ನೂ ಸರ್ಕಾರ ಲಾಭ ನಷ್ಟದ ತಕ್ಕಡಿಯಲ್ಲಿಟ್ಟು ತೂಗುತ್ತಿದೆ. ಇದರಿಂದಾಗಿ ರಾಜ್ಯದಾದ್ಯಂತ ನಾಲ್ಕೂ ನಿಗಮಗಳ ನೌಕರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇನ್ನು ಮಕ್ಕಳ ಶಾಲೆ ಶುಲ್ಕ ಪಾವತಿಗೂ ಪರದಾಡುವ ಸ್ಥಿತಿ ಎದುರಿಸುತ್ತಿರುವ ನೌಕರರನ್ನು ಮೇಲುತ್ತುವ ಕೆಲಸಕ್ಕೆ ಸಂಸ್ಥೆ ಮತ್ತು ಸಂಘಟನೆಗಳು ಮುಂದಾಗದಿರುವುದನ್ನು ಖಂಡಿಸಿ ಮುಷ್ಕರಕ್ಕೆ ನೌಕರರು ಬೇಸತ್ತು ಮುಂದಾಗಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆಯಲ್ಲಿ 1.35 ಲಕ್ಷ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಕೋವಿಡ್ ಪರಿಣಾಮ ಸಾರಿಗೆ ಸಂಸ್ಥೆಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಪಾತಾಳಕ್ಕೆ ಇಳಿದಿತ್ತು. ಹಲವು ಮಾರ್ಗಗಳ ಬಸ್ ಸಂಚಾರವನ್ನೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆದರೆ ಈಗ ಎಲ್ಲವೂ ಹಳಿಗೆ ಬರುತ್ತಿದೆ. ಈ ಸಂಕಷ್ಟ ಸಂದರ್ಭದಲ್ಲಿ ಸಾರಿಗೆ ನೌಕರರಿಗೆ ನೈತಿಕ ಬೆಂಬಲ ನೀಡಬೇಕಾಗಿರುವುದು ಸರ್ಕಾರದ ಜವಾಬ್ದಾರಿಯಾಗಿದೆ. ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂಬ ಆರೋಪ ಸಾರಿಗೆ ಸಂಸ್ಥೆ ನೌಕರರದ್ದಾಗಿದೆ.
ನೌಕರರ ಪ್ರಮುಖ ಬೇಡಿಕೆ
ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ
ಸರ್ಕಾರಿ ನೌಕರರಿಗೆ ನೀಡುವಂತೆಯೇ ಸಮಾನ ವೇತನ ನೀಡಿ
ರಾಜ್ಯ ಸಾರಿಗೆ ಸಂಸ್ಥೆಯ ನಿಗಮಗಳ ನೌಕರರಿಗೆ ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗೆ ವೇತನ ಪಾವತಿಗೆ ರಾಜ್ಯ ಸರ್ಕಾರ 1,286 ಕೋಟಿ ರೂ. ಅನುದಾನ ನೀಡಿತ್ತು.
ಶಾಲೆಗಳಲ್ಲಿ ಮಕ್ಕಳ ಆನ್ ಲೈನ್ ತರಗತಿಗಳು ಆರಂಭವಾದರೂ ಶುಲ್ಕ ಪಾವತಿಗೆ ಹಣವಿಲ್ಲದೇ ಹೆಣಗಾಡುತ್ತಿದ್ದಾಗ ಏಕಕಾಲಕ್ಕೆ ಅನುದಾನ ಬಿಡುಗಡೆ ಮಾಡಿದ್ದ ಸರ್ಕಾರ ನೌಕರರ ಮೊಗದಲ್ಲಿ ನಗು ಮೂಡುವಂತೆ ಮಾಡಿತ್ತು.
ಆದರೆ, ಅಕ್ಟೋಬರ್ ನಿಂದ ಸ್ವಂತ ಆದಾಯದಿಂದ ಆಯಾ ನಿಗಮಗಳು ತಮ್ಮ ನೌಕರರಿಗೆ ವೇತನ ಪಾವತಿಸಬೇಕೆಂದು ತಿಳಿಸಿತ್ತು.
ಆದರೆ ಕೋವಿಡ್ ನಿಂದಾಗಿ ನಿಗಮಗಳ ಸ್ಥಿತಿಯಲ್ಲಿ ಇಲ್ಲಿಯವರೆಗೆ ಯಾವುದೇ ಬದಲಾವಣೆ ಆಗಿಲ್ಲ.
ಆದ್ದರಿಂದ ಅಕ್ಟೋಬರ್ ವೇತನವನ್ನೇ ನವೆಂಬರ್ ಅಂತ್ಯಕ್ಕೆ ನೀಡಲಾಗಿದೆ. ಇನ್ನೂ ನವೆಂಬರ್ ತಿಂಗಳದ್ದು ನೀಡಿಲ್ಲ.
ಇವೆಲ್ಲವುಗಳಿಂದ ಬೇಸತ್ತಿರುವ ಸಾರಿಗೆ ನೌಕರರು ಬೀದಿಗಿಳಿಯಲು ನಿರ್ಧರಿಸಿದ್ದಾರೆ.
ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ
ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಹಸಿರು ಸೇನೆ ಮತ್ತು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದ್ದಾರೆ. ಸರ್ಕಾರ ತಕ್ಷಣ ಸಭೆ ಕರೆದು ನೌಕರರ ಸಮಸ್ಯೆಗಳನ್ನು ಆಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಆದರೆ, ಇದುವರೆಗೆ ಸರ್ಕಾರ ಈ ಬಗ್ಗೆ ಗಮನಹರಿಸಿಲ್ಲ. ಹೀಗಾಗಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇದೆ.
ಅನಂತ್ ಸುಬ್ಬರಾವ್‌ಗೆ ಭಾವಪೂರ್ಣ ಶ್ರದ್ಧಾಂಜಲಿ
ಈ ನಡುವೆ ನೌಕರರು ತಮ್ಮ ಸಂಘಟನೆಯ ಮುಖಂಡ ಅನಂತ್ ಸುಬ್ಬರಾವ್ ಅವರ ಫೋಟೋ ಒಂದನ್ನು ಹಾಕಿ ಭಾವಪೂರ್ಣ ಶ್ರದ್ಧಾಂಜಲಿ ಅನಂತ್ ಸುಬ್ಬರಾವ್ . ನಿಧನ 11-12-2020 ಎಂದು ಬರೆದಿರುವ ಬ್ಯಾನರ್ ಒಂದನ್ನು ಹಾಕಿ ಸುಬ್ಬರಾವ್ ವಿರುದ್ಧ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.