ಅಡ್ಡ ಮತದಾನ ಮಾಡಿದ್ದು ಯಾರೆಂದು ಗೊತ್ತು: ಮುಂದಿದೆ ಮಾರಿಹಬ್ಬ- ಎಚ್‌ಡಿಕೆ
ಇನ್ನು ನಾನು ಮಾನಸಿಕವಾಗಿ ಸಿದ್ದಗೊಂಡಿದ್ದು, ಯುವಕರಿಗೆ ಆದ್ಯತೆ ನೀಡಬೇಕು ಎಂದು ನಿರ್ಧಾರ ಮಾಡಿದ್ದೇನೆ. ಇಲ್ಲಿ ಜಿ.ಟಿ. ದೇವೇಗೌಡ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ನಾನು ಅವರ ಹೆಸರು ಎತ್ತುವುದಿಲ್ಲ. ನನಗೆ ಮೂರು ಬಾರಿ ಈ ಅನುಭವ ಅಗಿದೆ.

ಮೈಸೂರು: ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ನಾಲ್ಕು ಮಂದಿ ಶಾಸಕರು ಅಡ್ಡ ಮತದಾನ ಮಾಡಿದ್ದಾರೆ. ಅವರು ಯಾರು ಎಂಬುವುದು ನಮಗೆ ಗೊತ್ತಿದೆ. ಹೀಗಾಗಿ ಮುಂದಿದೆ ಮಾರಿಹಬ್ಬ ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಇಂದು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುರುವಾರ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ನಮ್ಮ ಪಕ್ಷದ ನಾಲ್ಕು ಮಂದಿ ಅಡ್ಡ ಮತದಾನ ಮಾಡಿದ್ದಾರೆ. ಅವರು ಯಾರು ಎಂಬುವುದು ಗೊತ್ತಿದೆ. ಆದರೆ, ಯಾವ ಕಾರಣಕ್ಕಾಗಿ ಕ್ರಾಸ್ ಓಟಿಂಗ್ ಅಗಿದೆ ಎಂಬುವುದು ಗೊತ್ತಿಲ್ಲ ಎಂದರು.
ಇನ್ನು ಈಗ ಕೆಲವು ಕಠಿಣವಾದ ನಿರ್ಧಾರ ಕೈಗೊಳ್ಳಬೇಕಾಗಿದೆ. ಇನ್ನು ಮುಂದೆ ನನ್ನ ಹೋರಾಟ ಪ್ರಾರಂಭವಾಗಲಿದೆ. ಏನೆಲ್ಲಾ ನಡೆಯುತ್ತಿದೆ ಎಂಬುವುದು ಗೊತ್ತಿದೆ. ನನ್ನ ಬಂಡವಾಳ ಬಿಚ್ಚಿಡುತ್ತಾರಂತೆ, ಆ ಕೆಲಸವನ್ನು ಮೊದಲು ಮಾಡಲಿ ಮುಂದಿದೆ ಮಾರಿ ಹಬ್ಬ ಅದನ್ನು ಮೊದಲು ಎದರಿಸಲಿ ಎಂದು ಸವಾಲು ಹಾಕಿದರು.
ಇನ್ನು ನಾನು ಮಾನಸಿಕವಾಗಿ ಸಿದ್ದಗೊಂಡಿದ್ದು, ಯುವಕರಿಗೆ ಆದ್ಯತೆ ನೀಡಬೇಕು ಎಂದು ನಿರ್ಧಾರ ಮಾಡಿದ್ದೇನೆ. ಇಲ್ಲಿ ಜಿ.ಟಿ. ದೇವೇಗೌಡ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ನಾನು ಅವರ ಹೆಸರು ಎತ್ತುವುದಿಲ್ಲ. ನನಗೆ ಮೂರು ಬಾರಿ ಈ ಅನುಭವ ಅಗಿದೆ.
ಅದು 2006ರಲ್ಲಿ ಏನಾಯ್ತು, 2013ರಲ್ಲಿ ಏನಾಯ್ತು? 2023 ಏನಾಯ್ತು ಎಂಬುವುದು ಗೊತ್ತು. ಹೀಗಾಗಿ ನನ್ನ ನಿಲುವು ಈ ವಿಚಾರವಾಗಿ ಸ್ಪಷ್ಟವಾಗಿದೆ. ಯಾರ ಒತ್ತಡಗಳು ಇದ್ದರೂ ನಾನು ದೃಢನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಹೇಳಿದರು.
ಎಚ್.ಡಿ. ದೇವೇಗೌಡ ಅವರು ಕೆಲವರ ಬಗ್ಗೆ ಅತೀವ ನಂಬಿಕೆ ಇಟ್ಟುಕೊಂಡಿದ್ದಾರೆ. ಅವರಿಗೆ ವ್ಯಾಮೋಹ, ಎಲ್ಲರನ್ನು ಉಳಿಸಿಕೊಳ್ಳಬೇಕು ಎಂದು ಪ್ರಯತ್ನ ನಡೆಸಿದ್ದಾರೆ. ಅವರ ನಂಬಿಕೆ ಉಳಿಸಿಕೊಳ್ಳದೆ ಇದ್ದರೆ ಏನು ಮಾಡುವುದು ಎಂದು ಪ್ರಶ್ನಿಸಿದರು.
ದೇವೇಗೌಡರಿಗೆ ಗೌರವ ಕೊಡಬೇಕು ಎಂಬ ಉದ್ದೇಶದಿಂದ ಅವರ ಅಭಿಪ್ರಾಯಕ್ಕೆ ತಲೆಭಾಗಿದ್ದೇನೆ. 2006ರಲ್ಲಿ ಅವರಿಗೆ ವಿರುದ್ಧವಾದ ನಿರ್ಧಾರ ಕೈಗೊಂಡಿದ್ದೆ. ಬಳಿಕ ಅವರು ಹೇಳಿದ ಹಾಗೆ ಕೇಳಿಕೊಂಡು ಬಂದಿದ್ದೇನೆ. ಪಕ್ಷ ಉಳಿಸಿಕೊಳ್ಳುವುದು ಒಂದು ಭಾಗ. ಅದರೆ, ಇದೀಗ ರಾಜ್ಯ ಉಳಿಸಿಕೊಳ್ಳಬೇಕಾಗಿದೆ ಎಂದರು.
ಪ್ಲೇ ವಿನ್ ಲಾಟರಿ ನಿಷೇಧ ಮಾಡಿದ್ದೆ. ಆದರೆ ಆಮಿಷ ಒಡ್ಡಿದ್ದರು, ಹೋಟಲ್‌ನಲ್ಲಿ ಸೂಟ್‌ಕೇಸ್ ಇಟ್ಟು ಕೂತಿದ್ದರು. ರಾಜಕೀಯಕ್ಕೆ ದುಡ್ಡು ಬೇಕು. ಆದರೆ, ಪಾಪದ ಹಣದಲ್ಲಿ ರಾಜಕೀಯ ಮಾಡಲ್ಲ. ಪರಿಷತ್ ಟಿಕೆಟ್ ಕೊಡಬೇಕಾದರೆ ಪಕ್ಷಕ್ಕೆ ದೇಣಿಗೆ ತೆಗೆದುಕೊಂಡಿದ್ದು ನಿಜ. ಪಕ್ಷ ನಡೆಯುವ ಉದ್ದೇಶ ಅಷ್ಟೇ. ನನ್ನ ಸ್ವಂತಕ್ಕೆ ಹಣ ತೆಗೆದುಕೊಂಡಿಲ್ಲ ಎಂದರು.
ಇನ್ನು ಬಿಡದಿ ಹೋರಾಟ ಮುಂದುವರಿಯಲಿದೆ. ಅದು ನನ್ನ ಕನಸಿನ ಕೂಸು ಎಂದು ಹೇಳಲಿ. ಅದರೆ ನಾನು ಇದರ ವಿರುದ್ಧ ಹೋರಾಟ ಮಾಡಿಯೇ ಸಿದ್ದ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.







