ವಿದ್ಯುತ್ ಖಾಸಗೀಕರಣ ನಿಲ್ಲಿಸಲು ಆಗ್ರಹಿಸಿ ಅತ್ತಹಳ್ಳಿ ದೇವರಾಜ್ ನೇತೃತ್ವದಲ್ಲಿ ಪ್ರತಿಭಟನೆ
ರಾಜ್ಯದಲ್ಲಿ ಸರ್ಕಾರಿ ವಿದ್ಯುತ್ ಸರಬರಾಜು ಸಂಸ್ಥೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದರೂ ಖಾಸಗಿ ಕಂಪನಿಗಳಿಗೆ ಲೈಸನ್ಸ್ ನೀಡುವ ಮೂಲಕ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಗೊಳಿಸಲು ಸರ್ಕಾರ ಮುಂದಾಗಿರುವುದು ಖಂಡನೀಯ

ಬನ್ನೂರು: ಸಾರ್ವಜನಿಕ ವಿದ್ಯುತ್ ವಿತರಣಾ ಕಂಪನಿಯ 19 ಕಂದಾಯ ಜಿಲ್ಲೆಗಳಲ್ಲಿ ವಿದ್ಯುತ್ ವಿತರಣಾ ಪರವಾನಿಗೆ ಕೋರಿ ಟಾಟಾ ಪವರ್ ಕಂಪನಿ ಲಿಮಿಟೆಡ್ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸುವಂತೆ ಆಕ್ಷೇಪಣೆ ರಾಜ್ಯ ಕಬ್ಬು ಬೆಳೆಗಾರ ಸಂಘ ಮೈಸೂರು ಜಿಲ್ಲೆ ತಿ ನರಸೀಪುರ ತಾಲೂಕು ಬನ್ನೂರು ಹೋಬಳಿ ಗ್ರಾಮಾಂತರ ಘಟಕ ಒತ್ತಾಯಿಸಿ ಪ್ರತಿಭಟನೆ ನಡೆಸಿತು.
ಬನ್ನೂರು ಉಪವಿಭಾಗದ ಚೆಸ್ಕಾಂ ಕಚೇರಿ ಮುಂದೆ ಇಂದು ಬೆಳಗ್ಗೆ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ನೇತೃತ್ವದಲ್ಲಿ ಜಮಾಯಿಸಿದ ರೈತರು ವಿದ್ಯುತ್ ಖಾಸಗೀಕರಣವನ್ನು ವಿರೋಧಿಸಿದರು.
ಈ ವೇಳೆ ಮಾತನಾಡಿದ ಅತ್ತಹಳ್ಳಿ ದೇವರಾಜ್, ಬನ್ನೂರು ಹೋಬಳಿ ಗ್ರಾಮಾಂತರ ಘಟಕದ ವತಿಯಿಂದ ಆಕ್ಷೇಪಣೆ ಸಲ್ಲಿಸುತ್ತಿದ್ದು, ಈ ಆಕ್ಷೇಪಣೆಯನ್ನು ಪರಿಗಣಿಸಿ ಟಾಟಾ ಪವರ್ ಕಂಪನಿಯು ವಿದ್ಯುತ್ ಕಾಯ್ದೆ 2003 ರ ಕಲಂ 14 , ಸೆಕ್ಷನ್ 6ರ ಅಡಿಯಲ್ಲಿ ಸಲ್ಲಿಸಿರುವ ಕರ್ನಾಟಕ ರಾಜ್ಯದ 19 ಕಂದಾಯ ಜಿಲ್ಲೆಗಳಲ್ಲಿ ಈಗ ಇರುವ ಸಾರ್ವಜನಿಕ ವಿದ್ಯುತ್ ವಿತರಣಾ ಕಂಪನಿಗಳಿಗೆ ಸಮಾನಾಂತರವಾಗಿ ವಿದ್ಯುತ್ ವಿತರಣಾ ಲೈಸನ್ಸ್ ಕೋರಿರುವ ಅರ್ಜಿಗಳನ್ನು ತಿರಸ್ಕರಿಸುವಂತೆ ಆಗ್ರಹಿಸಿದರು.
ರಾಜ್ಯದಲ್ಲಿ ಸರ್ಕಾರಿ ವಿದ್ಯುತ್ ಸರಬರಾಜು ಸಂಸ್ಥೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದರೂ ಖಾಸಗಿ ಕಂಪನಿಗಳಿಗೆ ಲೈಸನ್ಸ್ ನೀಡುವ ಮೂಲಕ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಗೊಳಿಸಲು ಸರ್ಕಾರ ಮುಂದಾಗಿರುವುದು ಖಂಡನೀಯ ಎಂದು ಆಕ್ರೋಶ ಹೊರಹಾಕಿದರು.
ಇನ್ನು ಟಾಟಾ ಹಾಗೂ ಇನ್ನಿತರೆ ಯಾವುದೇ ವಿದ್ಯುತ್ ಪವರ್ ಕಂಪನಿ ವಿದ್ಯುತ್ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸುವುದಕ್ಕೆ ರೈತರು ಹಾಗೂ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತೇವೆ, ವಿದ್ಯುತ್ ಕ್ಷೇತ್ರದ ಖಾಸಗೀಕರಣದಿಂದ ವಿದ್ಯುತ್ ದರ ಹೆಚ್ಚಳ ಆಗುವ ಸಾಧ್ಯತೆ ಇದ್ದು, ಗೃಹ ಜ್ಯೋತಿ ಯೋಜನೆ, ರೈತರ ಕೃಷಿ ಪಂಪ್ ಸೆಟ್‌ಗಳಿಗೆ ನೀಡಲಾಗುತ್ತಿರುವ ಉಚಿತ ವಿದ್ಯುತ್ ಹಾಗೂ ವಿವಿಧ ಸಹಾಯ ಧನಕ್ಕೆ ಪೆಟ್ಟು ಬೀಳುವ ಆತಂಕವಿದೆ ಎಂದರು.
ಅಲ್ಲದೆ ಖಾಸಗೀಕರಣದಿಂದ ಗ್ರಾಮೀಣ ಪ್ರದೇಶಗಳ ಜನರ ನಿರ್ಲಕ್ಷ್ಯ, ಉದ್ಯೋಗ ನೇಮಕಾತಿಗಳಲ್ಲಿ ಮೀಸಲಾತಿ ವ್ಯವಸ್ಥೆಗೆ ಹಿನ್ನಡೆಯಾಗುತ್ತದೆ, ಅಲ್ಲದೆ ಸರ್ಕಾರಿ ಉದ್ಯೋಗಗಳ ಭದ್ರತೆಗೆ ಅಪಾಯ ಉಂಟಾಗುತ್ತದೆ, ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಿಸಲಾದ ಲಕ್ಷಾಂತರ ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳು ಖಾಸಗಿ ಕಂಪನಿಗಳ ಪಾಲಾಗುವ ಸಾಧ್ಯತೆ ಇದ್ದು, ಮೂಲಭೂತ ಸೇವೆಯೇ ವ್ಯಾಪಾರದ ವಸ್ತುವಾಗುವ ಭೀತಿ ಉಂಟಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರಾಜ್ಯದ ಕೃಷಿಕರ ಹಾಗೂ ಸಾಮಾನ್ಯ ಜನರ ಹಿತದೃಷ್ಟಿಯಿಂದ ಟಾಟಾ ವಿದ್ಯುತ್ ಕಂಪನಿಗೆ ಹಾಗೂ ಇನ್ನಿತರೆ ಯಾವುದೇ ವಿದ್ಯುತ್ ಕಂಪನಿಗೆ ಪರವಾನಿಗೆ ನೀಡಬಾರದು ಹಾಗೂ ವಿದ್ಯುತ್ ಖಾಸಗೀಕರಣ ಪ್ರಕ್ರಿಯೆಯನ್ನು ಕೈಬಿಡಬೇಕೆಂದು ಒತ್ತಾಯಿಸಿದ ಅವರು, ವಿದ್ಯುತ್ ಖಾಸಗೀಕಾರಣದಿಂದ ರೈತರಿಗಷ್ಟೇ ಸಮಸ್ಯೆ ಆಗುವುದಿಲ್ಲ ಪ್ರತಿಯೊಂದು ಕುಟುಂಬದ ಮೇಲು ಪ್ರಬಲ ಹೊಡೆತ ಬೀಳುತ್ತದೆ. ಇದು ಒಂದು ದೊಡ್ಡ ಹುನ್ನಾರವಾಗಿದ್ದು, ದೊಡ್ಡ ಮಟ್ಟದಲ್ಲಿ ಸಂಚು ರೂಪಿಸಿ ಸರ್ಕಾರಿ ನೌಕರರ ಬದುಕನ್ನು ನಾಶಮಾಡಿ ಸರ್ವಾಧಿಕಾರಿ ಧೋರಣೆಗೆ ಹೊರಟಿರುವುಡು ಸರಿಯಾದ ಕ್ರಮ ಅಲ್ಲ. ಇದಕ್ಕೆ ಕಡಿವಾಣ ಹಾಕಬೇಕು, ವಿದ್ಯುತ್ ಖಾಸಗೀಕರಣವನ್ನು ಪ್ರತಿಯೊಬ್ಬರು ವಿರೋಧಿಸಬೇಕು ಎಂದು ಕರೆ ನೀಡಿದರು.
ತನ್ನದೇ ಆದ ವಿದ್ಯುತ್ ವಿತರಣಾ ಜಾಲವನ್ನು ಹೊಂದಿರುವುದು, ವಿದ್ಯುತ್ ವಿತರಣಾ ಹಕ್ಕು ಕೇಳುವುದಕ್ಕೆ ಇರುವ ಪೂರ್ವ ಷರತ್ತಾಗಿದ್ದರೂ ಇಂತಹ ಯಾವುದೇ ವಿತರಣಾ ಜಾಲವನ್ನು ಹೊಂದದೇ ಟಾಟಾ ಪವರ್ ಕಂಪನಿಯು ಯಾವುದೇ ಅಗತ್ಯ ಅಂಶಗಳನ್ನು ವಿಶ್ವಾಸಾರ್ಹವಾಗಿ ಹೊಂದಿಲ್ಲದಿರುವುದರಿಂದ ತಿರಸ್ಕಾರಕ್ಕೆ ಯೋಗ್ಯವಾಗಿದೆ. ಹೀಗಾಗಿ ಈ ಎಲ್ಲ ವಿಷಯಗಳನ್ನು ಗಂಭೀಗಿ ಪರಿಶೀಲಿಸಿ ರಾಜ್ಯ ರೈತರ ಹಾಗೂ ಜನ ಸಾಮಾನ್ಯರ ಹಿತದೃಷ್ಟಿಯಿಂದ ಟಾಟಾ ಪವರ್ ಕಂಪನಿಯ ಅರ್ಜಿಗಳನ್ನು ತಿರಸ್ಕರಿಸಬೇಕೆಂದು ಒತ್ತಾಯಿಸಿದರು.
ಇನ್ನು ನಮ್ಮ ಮನವಿಯನ್ನು ಕಡೆಗಣಿಸಿದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅವರ ನೇತೃತ್ವದಲ್ಲಿ ತೀವ್ರ ವಿಭಿನ್ನ ರೀತಿಯ ಹೋರಾಟದ ಮೂಲಕ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆ ಬಳಿಕ ಬನ್ನೂರು ಉಪವಿಭಾಗ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎಂ.ಹರ್ಷನ್ ಅವರ ಮೂಲಕ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಅತ್ತಹಳ್ಳಿ ಸಿ.ಲಿಂಗಣ್ಣ, ಅರುಣಕುಮಾರ್, ತಾಲೂಕು ಉಪಾಧ್ಯಕ್ಷ ಹೆಗ್ಗೂರು ರಂಗರಾಜು, ಕುಂತನಹಳ್ಳಿ ಕುಳ್ಳೇಗೌಡ, ಮೇಗಳಕೊಪ್ಪಲು ಕುಮಾರ್, ಎ.ಪಿ.ನವೀನ, ಬಿ.ಎನ್.ಶ್ರೀನಿವಾಸ, ಎ.ಎನ್.ಮಹೇಶ್, ಎ.ಪಿ.ಚೇತನ್, ರಾಮ (ಚಿಕ್ಕುಳ್ಳ), ಸ್ವಾಮಿ ಕುಂತನಹಳ್ಳಿ, ಬನ್ನೂರು ರಮೇಶ, ಶಂಕರಿ ಕರಗೇಗೌಡ, ಕೃಷ್ಣ ಕುಮಾರ್, ಶಿವಕುಮಾರ್ ಮತ್ತಿತರರು ಇದ್ದರು.







