KSRTC: ಶೇ.44 ರಷ್ಟು ಬಸ್ ಪ್ರಯಾಣ ದರ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಟಿಕೆಟ್ ದರದಲ್ಲಿ ಬರೋಬ್ಬರಿ ಶೇ.44 ರಷ್ಟು ಏರಿಕೆ ಮಾಡಲು ಪ್ರಸ್ತಾಪಿಸಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಶೇ.33ರಷ್ಟು ಹೆಚ್ಚಿಸಲು ಅನುಮತಿ ಕೋರಿದೆ. ಇದರೊಂದಿಗೆ ಕಲ್ಯಾಣ ಕರ್ನಾಟಕ (KKRTC) ಮತ್ತು ವಾಯುವ್ಯ ಕರ್ನಾಟಕ (NWKRTC) ಸಾರಿಗೆ ಸಂಸ್ಥೆಗಳೂ ಸಹ ದರ ಏರಿಕೆಗೆ ಒತ್ತಾಯಿಸಿವೆ.

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಸ್ ಪ್ರಯಾಣದ ಟಿಕೆಟ್ ದರವನ್ನು ಸುಮಾರು ಶೇ.44 ರಷ್ಟು ಹೆಚ್ಚಿಸಲು ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಈ ಮುಲಕ ಶೀಘ್ರದಲ್ಲೇ ಸಾರಿಗೆ ಸಂಸ್ಥೆಗಳು ದರ ಏರಿಕೆಯ ಬಿಸಿಯನ್ನು ರಾಜ್ಯದ ಜನತೆಯ ಜೇಬಿಗೆ ಮುಟ್ಟಿಸಲು ಮುಂದಾಗಿವೆ.
ಇನ್ನು ತೀವ್ರ ಆರ್ಥಿಕ ನಷ್ಟ ಹಾಗೂ ಡೀಸೆಲ್ ದರ (Diesel Price) ಏರಿಕೆಯಿಂದ ತತ್ತರಿಸಿರುವ KSRTC, BMTC, KKRTC ಹಾಗೂ NWKRTCಯ ಈ ನಾಲ್ಕೂ ಸಾರಿಗೆ ನಿಗಮಗಳು ಬಸ್ ಟಿಕೆಟ್ ದರವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕೃತ ಪ್ರಸ್ತಾವನೆ ಸಲ್ಲಿಸಿವೆ.
ನಾಲ್ಕೂ ಸಾರಿಗೆ ನಿಗಮಗಳು ಪ್ರತ್ಯೇಕವಾಗಿ ದರ ಪರಿಷ್ಕರಣೆಗೆ ಬೇಡಿಕೆ ಇಟ್ಟಿದ್ದು, ಇದರಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಟಿಕೆಟ್ ದರದಲ್ಲಿ ಬರೋಬ್ಬರಿ ಶೇ.44 ರಷ್ಟು ಏರಿಕೆ ಮಾಡಲು ಪ್ರಸ್ತಾಪಿಸಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಶೇ.33ರಷ್ಟು ಹೆಚ್ಚಿಸಲು ಅನುಮತಿ ಕೋರಿದೆ. ಇದರೊಂದಿಗೆ ಕಲ್ಯಾಣ ಕರ್ನಾಟಕ (KKRTC) ಮತ್ತು ವಾಯುವ್ಯ ಕರ್ನಾಟಕ (NWKRTC) ಸಾರಿಗೆ ಸಂಸ್ಥೆಗಳೂ ಸಹ ದರ ಏರಿಕೆಗೆ ಒತ್ತಾಯಿಸಿವೆ.
ರಾಜ್ಯ ಸರ್ಕಾರ ಈ ಹಿಂದೆ 2025ರ ಜನವರಿ 5ರಿಂದ ಜಾರಿಗೆ ಬರುವಂತೆ ಬಸ್ ಪ್ರಯಾಣದ ಟಿಕೆಟ್ ದರವನ್ನು ಶೇ.15ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು. ಈಗ ಸಾರಿಗೆ ಸಂಸ್ಥೆಗಳು ಮತ್ತೊಮ್ಮೆ ದರ ಪರಿಷ್ಕರಣೆಗಾಗಿ ಸರ್ಕಾರಕ್ಕೆ ಹೊಸ ಪ್ರಸ್ತಾವನೆ ಸಲ್ಲಿಸಿವೆ. ಸಾರಿಗೆ ನಿಗಮಗಳು ದರ ಏರಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದು, ತಕ್ಷಣವೇ ಈ ಕ್ರಮ ಕೈಗೊಳ್ಳದಿದ್ದರೆ ಸಂಸ್ಥೆಗಳು ಸಂಪೂರ್ಣ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿವೆ ಎಂದು ಸಿಎಂ ಡಿಕೆಶಿ ಅವರಿಗೆ ಮನವರಿಕೆ ಮಾಡಿಕೊಟ್ಟಿವೆ.
ದರ ಏರಿಕೆಗೆ ಏಕೆ ಮಾಡಬೇಕು?: ಮೇ 25 ರವರೆಗಿನ ಇಂಧನ ದರ ಏರಿಕೆಯು ನಿಗಮಗಳ ಸೊರಗುವಿಕೆಗೆ ಪ್ರಮುಖ ಕಾರಣವಾಗಿದೆ. ಕೇವಲ ಹತ್ತು ದಿನಗಳ ಅವಧಿಯಲ್ಲಿ ನಾಲ್ಕು ಬಾರಿ ಡೀಸೆಲ್ ದರ ಏರಿಕೆಯಾಗಿದೆ. ಇದರಿಂದಾಗಿ ಪ್ರತಿ ಲೀಟರ್ ಡೀಸೆಲ್ ಬೆಲೆಯಲ್ಲಿ ಬರೋಬ್ಬರಿ 7.81 ರೂ. ಏರಿಕೆ ಕಂಡಿದ್ದು, ಇದು ಭಾರಿ ಆರ್ಥಿಕ ಹೊರೆಯಾಗುತ್ತಿದೆ.
ಇತ್ತ ಪ್ರತಿ ನಿತ್ಯ ನಾಲ್ಕೂ ನಿಗಮಗಳ ಬಸ್‌ಗಳಿಗೆ 13 ಲಕ್ಷ ಲೀಟರ್‌ಗೂ ಹೆಚ್ಚು ಡೀಸೆಲ್ ಬಳಕೆಯಾಗುತ್ತಿದೆ. ಈ ಇಂಧನ ದರ ಏರಿಕೆಯಿಂದಾಗಿ ಸಾರಿಗೆ ನಿಗಮಗಳಿಗೆ ತಿಂಗಳಿಗೆ 40 ಕೋಟಿ ರೂ. ಹಾಗೂ ವರ್ಷಕ್ಕೆ ಬರೋಬ್ಬರಿ 480 ಕೋಟಿ ರೂ.ಗಳ ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತಿದೆ.
ಸರ್ಕಾರದ ಮಹತ್ವಾಕಾಂಕ್ಷಿ ‘ಶಕ್ತಿ’ ಯೋಜನೆ, ಇನ್ನೊಂದೆಡೆ ದಿನೇದಿನೇ ಗಗನಕ್ಕೇರುತ್ತಿರುವ ಕಾರ್ಯಾಚರಣೆ ವೆಚ್ಚ ಹಾಗೂ ಸಾರಿಗೆ ನೌಕರರ ವೇತನ ಪರಿಷ್ಕರಣೆ ಈ ತ್ರಿವಳಿ ಸವಾಲುಗಳಿಂದಾಗಿ ಸಾರಿಗೆ ನಿಗಮಗಳ ಮೇಲಿನ ಆರ್ಥಿಕ ಹೊರೆ ಮತ್ತು ಆಡಳಿತಾತ್ಮಕ ಜವಾಬ್ದಾರಿ ಈಗ ಹಿಂದೆಂದಿಗಿಂತಲೂ ದುಪ್ಪಟ್ಟಾಗಿದೆ.
ಈಗಾಗಲೇ ನಷ್ಟದ ಸುಳಿಗೆ ಸಿಲುಕಿರುವ ಸಾರಿಗೆ ಸಂಸ್ಥೆಗಳನ್ನು ಉಳಿಸಿಕೊಳ್ಳಲು ಟಿಕೆಟ್ ದರ ಏರಿಕೆ ಅನಿವಾರ್ಯ ಎಂಬುದು ಅಧಿಕಾರಿಗಳ ವಾದವಾಗಿದೆ. ಸದ್ಯ ಪ್ರಸ್ತಾವನೆ ಮುಖ್ಯಮಂತ್ರಿಗಳ ಅಂಗಳದಲ್ಲಿದ್ದು, ಸರ್ಕಾರ ಎಷ್ಟು ಪ್ರಮಾಣದ ದರ ಏರಿಕೆಗೆ ಹಸಿರು ನಿಶಾನೆ ನೀಡಲಿದೆ ಎಂಬುರದ ಬಗ್ಗೆ ಎಲ್ಲರ ಚಿತ್ತವಿದೆ.
ಆದರೆ, ಸರ್ಕಾರದ ಮಹತ್ವಾಕಾಂಕ್ಷಿ ‘ಶಕ್ತಿ’ ಯೋಜನೆಯಡಿ ಪ್ರಯಾಣಿಸುತ್ತಿರುವ ಮಹಿಳೆಯ ಟಿಕೆಟ್ ಮೌಲ್ಯದ ದರವನ್ನು ಯಥಾವತ್ತಾಗಿ ಸರ್ಕಾರ ಬಿಡುಗಡೆ ಮಾಡಿದರೆ ಸಾರಿಗೆ ಸಂಸ್ಥೆಗಳಿಗೆ ಆರ್ಥಿಕ ಹೊರೆ ಅಷ್ಟಾಗಿ ಆಗುವುದಿಲ್ಲ. ಜತೆಗೆ ಈಗ ಘೋಷಣೆಮ ಮಾಡಿರುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ಯೋಜನೆಯ ಹಣವನ್ನು ನಾಲ್ಕೂ ನಿಗಮಗಳಿಗೆ ಬಿಡುಗಡೆ ಮಾಡಿದರೆ ಸಮಸ್ಯೆ ಆಗದು.
ಇದಿಷ್ಟೇ ಅಲ್ಲದೆ, ಅಂಗವಿಕಲರ ಬಸ್ ಪಾಸ್, ಹಿರಿಯ ನಾಗರಿಕರಿಗೆ ನೀಡುವ ರಿಯಾಯಿತಿ, ಪತ್ರಕರ್ತರಿಗೆ ನೀಡುವ ರಿಯಾಯಿತಿ ಬಸ್‌ಪಾಸ್ ಹೀಗೆ ಸರ್ಕಾರ ಘೋಷಣೆ ಮಾಡಿ ಕೊಡುತ್ತಿರುವ ರಿಯಾಯಿತಿ ಹಣವನ್ನು ಕಾಲಕಾಲಕ್ಕೆ ವಿಳಂಬವಿಲ್ಲದೆ ಬಿಡುಗಡೆ ಮಾಡಿದರೆ ಸಾರಿಗೆ ಸಂಸ್ಥೆಗಳು ಸರ್ಕಾರದ ಬಳಿ ಕೈ ಚಾಚುವ ಪ್ರಮಯವೇ ಬರುವುದಿಲ್ಲ ಆದರೆ, ಸರ್ಕಾರ ಇದಾವುದನ್ನು ಸಮರ್ಪಕವಾಗಿ ಬಿಡುಗಡೆ ಮಾಡದೆ ಈರೀತಿ ಸಾರಿಗೆ ನಿಗಮಗಳನ್ನು ಸಮಸ್ಯೆಯ ಸುಳಿಯಲ್ಲಿ ಸಿಲುಕಿಸಿದೆ.







