NEWSನಮ್ಮರಾಜ್ಯಬೆಂಗಳೂರು

ಗೃಹಜ್ಯೋತಿ ಯೋಜನೆ ದುರ್ಬಳಕೆ ತಡೆಗಾಗಿ ಮತ್ತೆ ಅರ್ಜಿ: ಸಿಎಂ ಡಿಕೆಶಿ ಅಧಿಕೃತ ಘೋಷಣೆ

ಸದ್ಯ ರಾಜ್ಯದಲ್ಲಿ ಸುಮಾರು 1.64 ಕೋಟಿ ಜನರಿಗೆ ಗೃಹಜ್ಯೋತಿ ಸೌಲಭ್ಯ ನೀಡಲಾಗುತ್ತಿದ್ದು, ಇದರಲ್ಲಿ ವ್ಯಾಪಕ ದುರ್ಬಳಕೆಯಾಗುತ್ತಿರುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಸರ್ಕಾರ ಗ್ಯಾರಂಟಿ ಯೋಜನೆಗೆ ಜರಡಿ ಹಿಡಿಯಲು ಸಜ್ಜಾಗಿದೆ.

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಜ್ಯೋತಿ (Gruha Jyothi Scheme) ಉಚಿತ ವಿದ್ಯುತ್ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ಮಹತ್ವದ ಪರಿಷ್ಕರಣೆಗೆ ಕೈ ಹಾಕಿದ್ದು, ಯೋಜನೆಯ ದುರ್ಬಳಕೆ ತಡೆಗಟ್ಟಲು ಮತ್ತು ಅರ್ಹರಿಗೆ ಮಾತ್ರ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ಮನೆ ಮನೆಗೆ ಹೊಸ ಅರ್ಜಿ ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕೃತವಾಗಿ ಘೋಷಿಸಿದ್ದಾರೆ.

ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನೌಕರರ ಸಂಘ ಮತ್ತು ಅಸೋಸಿಯೇಷನ್‌ಗಳ ಒಕ್ಕೂಟದ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿದ ಬಳಿಕ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದರು.

ಸದ್ಯ ರಾಜ್ಯದಲ್ಲಿ ಸುಮಾರು 1.64 ಕೋಟಿ ಜನರಿಗೆ ಗೃಹಜ್ಯೋತಿ ಸೌಲಭ್ಯ ನೀಡಲಾಗುತ್ತಿದ್ದು, ಇದರಲ್ಲಿ ವ್ಯಾಪಕ ದುರ್ಬಳಕೆಯಾಗುತ್ತಿರುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಸರ್ಕಾರ ಗ್ಯಾರಂಟಿ ಯೋಜನೆಗೆ ಜರಡಿ ಹಿಡಿಯಲು ಸಜ್ಜಾಗಿದೆ.

ನಮ್ಮ ರಾಜ್ಯದ ಜನರಿಗೆ ಮಾತ್ರ ಈ ಸೌಲಭ್ಯ ಸಿಗಬೇಕು. ಬದುಕಲು ಬಂದಿರುವ ಹೊರರಾಜ್ಯದವರಿಗೆ ಅಥವಾ ಇಲ್ಲಿನ ಮತದಾರರಲ್ಲದವರಿಗೆ ಇನ್ನು ಮುಂದೆ ಗೃಹಜ್ಯೋತಿ ಸೌಲಭ್ಯ ಸಿಗುವುದಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. ಒಂದೇ ಹೆಸರಿನಲ್ಲಿ ಅಥವಾ ಒಂದಕ್ಕಿಂತ ಹೆಚ್ಚು ಕಡೆ ಡಬಲ್ ಗೃಹಜ್ಯೋತಿ ಸಂಪರ್ಕ ಹೊಂದಿದ್ದರೆ ಅದನ್ನು ತಕ್ಷಣವೇ ಕಡಿತಗೊಳಿಸಲಾಗುವುದು ಎಂದು ಹೇಳಿದ್ದಾರೆ.

ಮನೆ ಬಾಗಿಲಿಗೆ ಅರ್ಜಿ: ಗೃಹಜ್ಯೋತಿ ಯೋಜನೆಯನ್ನು ಮತ್ತಷ್ಟು ಪಾರದರ್ಶಕಗೊಳಿಸಲು ಹೊಸ ಅರ್ಜಿಗಳನ್ನು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ತಿಳಿಸಿದರು.

ಮನೆ ಮನೆಗೆ ತಲುಪಿಸುವ ಹೊಸ ಅರ್ಜಿಯಲ್ಲಿ ಸಾರ್ವಜನಿಕರ ಫೋಟೋ ಹಾಗೂ ಇತರೆ ಮಾಹಿತಿ ಸರಿಯಾಗಿದೆಯೇ ಎಂಬುದನ್ನು ಇಂಧನ ಇಲಾಖೆಯ ಸಿಬ್ಬಂದಿ ಖುದ್ದಾಗಿ ಪರಿಶೀಲನೆ ನಡೆಸಬೇಕು. ಯಾವುದೇ ಕಾರಣಕ್ಕೂ ಅರ್ಹರಿಗೆ ಅನ್ಯಾಯವಾಗಬಾರದು ಎಂದು ಸಿಎಂ ಹೇಳಿದರು.

ಇನ್ನು ಐದು ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ ಹಾಗೂ ಪರಿಶೀಲನೆಗಾಗಿ ಪಂಚಾಯಿತಿ ಮಟ್ಟದಲ್ಲಿ ವಿಶೇಷ ಸಮಿತಿಗಳನ್ನು ರಚಿಸಿ, ಸದಸ್ಯರನ್ನು ನೇಮಕ ಮಾಡಿಕೊಳ್ಳಲಾಗುವುದು. ಇದರ ಜತೆಗೆ ಅರ್ಹತೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಲು ಪ್ರತ್ಯೇಕ ಅಧಿಕಾರಿಗಳಿಗೂ ಜವಾಬ್ದಾರಿ ನೀಡಲಾಗುವುದು ಎಂದ ಅವರು, ಇದೇ ವೇಳೆ ಇಲಾಖೆಯ ನೌಕರರ ಕೆಲಸವನ್ನು ಶ್ಲಾಘಿಸಿದ ಡಿಕೆಶಿ, ಕರೆಂಟ್ ಒಂದು ನಿಮಿಷ ಹೋದರೂ ಆ ‘ಡಿಕೆ ನನ್ಮಗ ಬಂದ, ಕರೆಂಟ್ ತೆಗೆದ’ ಎಂದು ಸಾರ್ವಜನಿಕರು ಬೈಯುತ್ತಾರೆ. ಆದರೆ ಇಲಾಖೆಯ ಸಿಬ್ಬಂದಿಯಾಗಿ ನೀವು ಅತ್ಯುತ್ತಮ ಕೆಲಸ ಮಾಡುತ್ತಿದ್ದೀರಿ ಎಂದರು.

ಇಂಧನ ಸಚಿವ ಕೆ.ಜೆ. ಜಾರ್ಜ್ ಮಾತನಾಡಿ, ಯೋಜನೆಯಲ್ಲಿ ಆಗುತ್ತಿರುವ ತಪ್ಪುಗಳನ್ನು ಸರಿಪಡಿಸುವುದು ಸರ್ಕಾರದ ಕರ್ತವ್ಯ. ವ್ಯವಸ್ಥೆಯನ್ನು ಸರಿಹಾದಿಗೆ ತರುತ್ತಿರುವುದನ್ನು ವಿಪಕ್ಷಗಳು ಟೀಕಿಸುತ್ತಿರುವುದು ಸರಿಯಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ಸಿಎಂ ನಿರ್ಧಾರವನ್ನು ಬೆಂಬಲಿಸಿದರು.

ಈ ಸಂದರ್ಭದಲ್ಲಿ ನೌಕರರ ಸಂಘದ ಅಧ್ಯಕ್ಷ ಕೆ. ಬಲರಾಮ್, ಇಂಜಿನಿಯರುಗಳ ಸಂಘದ ಅಧ್ಯಕ್ಷ ಸಿ. ಬಸವಣ್ಣ ಸೇರಿದಂತೆ ವಿವಿಧ ವಿದ್ಯುತ್‌ ಸರಬರಾಜು ಕಂಪನಿಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Deva
the authorDeva

Leave a Reply

error: Content is protected !!
Latest news
ಗೃಹಜ್ಯೋತಿ ಯೋಜನೆ ದುರ್ಬಳಕೆ ತಡೆಗಾಗಿ ಮತ್ತೆ ಅರ್ಜಿ: ಸಿಎಂ ಡಿಕೆಶಿ ಅಧಿಕೃತ ಘೋಷಣೆ ರಾಜ್ಯಾದ್ಯಂತ ನಾಳೆಯಿಂದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ: ಮನೆಗೆ ಬರುವ ಬಿಎಲ್ಒಗಳಿಗೆ ಸಹಕರಿಸಲು ಡಿಸಿಗಳು ಕರೆ ರಾಜ್ಯಾದ್ಯಂತ ಶೇ.61 ರಷ್ಟು ಮಳೆ ಕೊರತೆ: ಕಾವೇರಿ ನದಿ ಸೇರಿದಂತೆ ಬರಿದಾಗುತ್ತಿವೆ ಎಲ್ಲ ನದಿಗಳ ಒಡಲು- ಆತಂಕದಲ್ಲಿ ಅನ್... ಮತ್ತೆ ಜಾಗತಿಕ ಮಟ್ಟದಲ್ಲಿ ತೀವ್ರ ಆತಂಕ ಸೃಷ್ಟಿಸಿದ ಯುದ್ಧ: ಇರಾನ್‌ ಡ್ರೋನ್ ದಾಳಿ 'ಅಂತ್ಯವಾಯ್ತು' ಕಿರುಚಿತ್ರ ತಂಡದ ಮೂವರು ಕಟ್ಟಡ ಕುಸಿದು ಸಾವು, ಮತ್ತಿಬ್ಬರಿಗೆ ಗಾಯ ರೈತರ ಬೆದರಿಸಿ ಬಲವಂತದ ಭೂಸ್ವಾಧೀನ ಪ್ರಕ್ರಿಯೆ ನಡೆಸುವ ಸಾಹಸಕ್ಕೆ ಕೈ ಹಾಕಬೇಡಿ: ಅಧಿಕಾರಿಗಳಿಗೆ ಎಚ್‌ಡಿಕೆ ಎಚ್ಚರಿಕೆ ವಾಯವ್ಯ ಸಾರಿಗೆ: ಎಂಡಿ ಆದೇಶ ಪಾಲಿಸದ ಕಂಡಕ್ಟರ್‌ ವಿರುದ್ಧ ಪ್ರಕರಣ ದಾಖಲು ನಾಳೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ BMTC- KSRTC ನಿವೃತ್ತ ನೌಕರರ ಸಂಘದಿಂದ ಬೃಹತ್‌ ಪ್ರತಿಭಟನೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ: 72,186 ಹುದ್ದೆಗಳ ನೇರ ನೇಮಕಾತಿಗೆ ಆದೇಶ ಬಸ್‌ಗಳು ಸರ್ಕಾರದ್ದು, ಆದರೂ ನೌಕರರು ಸರ್ಕಾರಿ ನೌಕರರಲ್ಲ-ಹೇಗಿದೆ ಲೆಕ್ಕಾಚಾರ!?