ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಜಮೀನಿನ ಮ್ಯುಟೇಷನ್ ಬದಲಾವಣೆ ಹಾಗೂ ರಕ್ಷಣೆ ಒದಗಿಸಲು 11 ಲಕ್ಷ ರೂ. ಲಂಚ ಪಡೆಯುತ್ತಿದ್ದ ಬೆಂಗಳೂರು ಉತ್ತರ ತಾಲೂಕಿನ ಜಾಲ ಹೋಬಳಿಯ ಕಂದಾಯ ನಿರೀಕ್ಷಕ ಎಚ್. ಪುಟ್ಟಹನುಮಯ್ಯ ಅಲಿಯಾಸ್ ಪ್ರವೀಣ್ ಮತ್ತು ಚಿಕ್ಕಜಾಲ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೆಬಲ್ ರಾಜು ಅವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಗುರುವಾರ ರಾತ್ರಿ ಬಂಧಿಸಿದೆ.
ಇದೇ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಚಿಕ್ಕಜಾಲ ಠಾಣೆಯ ಇನ್ಸ್ಪೆಕ್ಟರ್ ಯಶವಂತ ಎಸಿಬಿ ಕಾರ್ಯಾಚರಣೆಯ ಸುದ್ದಿ ತಿಳಿದು ಪರಾರಿಯಾಗಿದ್ದಾರೆ. ಅವರಿಗಾಗಿ ಶೋಧ ನಡೆಯುತ್ತಿದೆ.
60 ಲಕ್ಷ ರೂ.ಗಳಿಗೆ ಬೇಡಿಕೆ: ಬೆಂಗಳೂರು ಉತ್ತರ ತಾಲೂಕಿನ ಜಾಲ ಹೋಬಳಿಯಲ್ಲಿ ವ್ಯಕ್ತಿಯೊಬ್ಬರು 2018ರಲ್ಲಿ 5 ಎಕರೆ ಜಮೀನು ಖರೀದಿಸಿದ್ದರು. ಅದೇ ಜಮೀನನ್ನು ಪುನಃ ಬೇರೊಬ್ಬರಿಗೆ ಮಾರಾಟ ಮಾಡಲು ಮೂಲ ಮಾಲೀಕರು ಒಪ್ಪಂದ ಮಾಡಿಕೊಂಡಿದ್ದರು. ಈ ಕುರಿತು ದೂರುದಾರರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಹೀಗಾಗಿ ಜಮೀನು ಮರು ಮಾರಾಟಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು.
ಈ ನಡುವೆ ಜಮೀನಿನ ಮ್ಯುಟೇಷನ್ನಲ್ಲಿ ಹೆಸರು ಬದಲಾವಣೆ ಮಾಡುವಂತೆ ಖರೀದಿದಾರರು ಅರ್ಜಿ ಸಲ್ಲಿಸಿದ್ದರು. ಈ ಪ್ರಕ್ರಿಯೆ ಪೂರ್ಣಗೊಳಿಸಲು 50 ಲಕ್ಷ ರೂ. ಲಂಚ ನೀಡುವಂತೆ ಪುಟ್ಟಹನುಮಯ್ಯ ಬೇಡಿಕೆ ಇಟ್ಟಿದ್ದರು. ಜಮೀನಿನ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇರುವ ಕುರಿತು ಸ್ಥಳದಲ್ಲಿ ಮಾಹಿತಿ ಫಲಕ ಅಳವಡಿಸಿ, ರಕ್ಷಣೆ ನೀಡುವಂತೆಯೂ ದೂರುದಾರರು ಚಿಕ್ಕಜಾಲ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದರು. ಈ ವೇಳೆ ಅವರು 10 ಲಕ್ಷ ರೂ. ಬೇಡಿಕೆ ಇಟ್ಟಿದ್ದರು ಎಂದು ದೂರು ದಾರರು ತಿಳಿಸಿದ್ದಾರೆ.
ದೂರರ ಲಿಖಿತ ಹೇಳಿಕೆ ಮೇರೆಗೆ ಕಾರ್ಯಾಚರಣೆಗೆ ಇಳಿದ ಎಸಿಬಿ ಅಧಿಕಾರಿಗಳು 11 ಲಕ್ಷ ರೂ. ಲಂಚ ಪಡೆಯುತ್ತಿದ್ದ ಕಂದಾಯ ನಿರೀಕ್ಷಕ ಎಚ್. ಪುಟ್ಟಹನುಮಯ್ಯ ಮತ್ತು ಚಿಕ್ಕಜಾಲ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೆಬಲ್ ರಾಜು ಅವರನ್ನು ಬಂಧಿಸಿ ಕರೆದುಕೊಂಡು ಹೋಗಿದ್ದಾರೆ.