ವಿಜಯಪಥ ಸಮಗ್ರ ಸುದ್ದಿ
ಬಾಗಲಕೋಟೆ: ಕರ್ನಾಟಕದಲ್ಲಿ ಯಡಿಯೂರಪ್ಪ ರೈತರ, ಜನರ ಅಭಿವೃದ್ಧಿಗೆ ಯಾವುದೇ ರೀತಿ ಹಿಂದೆ ಬಿದ್ದಿಲ್ಲ. ಕೇಂದ್ರದ ಎಲ್ಲಾ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಮೂಲಕ ಉತ್ತಮ ಆಡಳಿತ ನೀಡುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ, ಬಿಜೆಪಿ ಚಾಣಕ್ಯ ಅಮಿತ್ ಷಾ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಹಾಡಿಹೊಗಳುವ ಮೂಲಕ ಪರೋಕ್ಷವಾಗಿ ಮತ್ತೊಮ್ಮೆ ನಾಯಕತ್ವ ಬದಲಾವಣೆ ಆಗುತ್ತಾರೆ ಎನ್ನುವ ವಿಪಕ್ಷಗಳಿಗೆ ಕುಟುಕಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರಕಲಮಟ್ಟಿಯಲ್ಲಿ ನಿರಾಣಿ ಸಂಸ್ಥೆಯ ಸಕ್ಕರೆ ಕಾರ್ಖಾನೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ತೀವ್ರವಾಗಿ ಹರಿಹಾಯ್ದರು.
ಬಾಗಲಕೋಟೆ ಕ್ಷೇತ್ರದ ಪುಣ್ಯಭೂಮಿಗೆ ವಂದಿಸುತ್ತೇನೆ.ಇಲ್ಲಿಯ ಜನರು, ರೈತರು ಕೃಷಿಯನ್ನೇ ಅವಲಂಬಿಸಿದ್ದಾರೆ. ಈ ಭಾಗದ ರೈತರಿಗೆ ಕೋಟಿ ಕೋಟಿ ವಂದನೆಗಳು. ಮಕರ ಸಂಕ್ರಾಂತಿ ರೈತರ ಪಾಲಿನ ದೊಡ್ಡ ಹಬ್ಬ. ಸೂರ್ಯ ಪಥ ಬದಲಿಸುವ ಸಮಯ. ರೈತರಿಗೆ ಶುಭ ಕಾಮನೆಗಳು ಎಂದರು.
ಕರ್ನಾಟಕ ಜನರು 2014-2019 ರಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಪೂರ್ಣ ಬಹುಮತ ಕೊಟ್ಟಿದ್ದಾರೆ. ನಾವು ಅವರಿಗೆ ಆಭಾರಿಯಾಗಿದ್ದೇವೆ. ಮೋದಿ ಪ್ರಧಾನಿಯಾಗಲು ಕರ್ನಾಟಕದ ಕೊಡುಗೆ ಅಪಾರವಾಗಿದೆ. ಮೋದಿರವರ ಜೋಳಿಗೆಯನ್ನು ಕರ್ನಾಟಕದ ಜನತೆ ತುಂಬಿದ್ದಾರೆ. ಥೆನಾಲ್ ಉತ್ಪಾದನೆಗೆ ಪ್ರಧಾನಿ ಮೋದಿ ಯೋಜನೆ ನೀಡಿದ್ದಾರೆ. ಇದರ ಜೊತೆಗೆ ನರೇಂದ್ರ ಮೋದಿ ಕನಸನ್ನು ಮುರುಗೇಶ್ ನಿರಾಣಿ ನನಸು ಮಾಡುತ್ತಿದ್ದಾರೆ ಎಂದು ಹೇಳಿದರು.
2022ರ ಹೊತ್ತಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕೇಂದ್ರ ಸರ್ಕಾರ ಅನುಕೂಲ ಕಲ್ಪಿಸಲಿದೆ. ರೈತರ ಆದಾಯ ಹೆಚ್ಚಿಸುವ ಗುರಿಯೇ ಮೋದಿಯವರಿದ್ದಾಗಿದೆ. ಕಾಂಗ್ರೆಸ್ ತನ್ನ ಅಧಿಕಾರದಾವಧಿಯಲ್ಲಿ ರೈತರಿಗೆ ಖರ್ಚು ಮಾಡಿದ್ದು ಕೇವಲ 21300 ಕೋಟಿ ರೂ. ಮೋದಿ 1.34 ಲಕ್ಷ ಕೋಟಿ ರೂಪಾಯಿಯನ್ನು ರೈತರಿಗಾಗಿ ಖರ್ಚು ಮಾಡ್ತಾ ಇದ್ದಾರೆ. ಮೋದಿಜಿ ಕಾಂಗ್ರೆಸ್ಸಿಗರಿಗಿಂತ ಉತ್ತಮ ಆಡಳಿತ ನೀಡುತ್ತಿದ್ದಾರೆ. ಈಗ ರೈತರಿಗೆ ನೇರವಾಗಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಅವರ ಅಕೌಂಟಿಗೇ ಹಣ ಜಮೆ ಆಗುತ್ತಿದೆ. ಮೋದಿ ಸರ್ಕಾರ 10ಲಕ್ಷ ಕೋಟಿಗೂ ಹೆಚ್ಚು ಖರ್ಚು ಮಾಡಿ ರೈತರ ಅಭಿವೃದ್ದಿಗೆ ಶ್ರಮಿಸಲಾಗುತ್ತಿದೆ ಎಂದರು.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಾತನಾಡಿ, ಈ ಕಾರ್ಯಕ್ರಮದಲ್ಲಿ ನಾವೆಲ್ಲಾ ಒಟ್ಟಾಗಿ ಸಂತೋಷದಿಂದ ಭಾಗಿಯಾಗಿದ್ದೇವೆ. ಸರ್ದಾರ್ ವಲ್ಲಭಭಾಯಿ ಪಟೇಲ್ ನಂತರ ಗೃಹ ಮಂತ್ರಿಯಾಗಿ ಅಮಿತ್ ಷಾ ಅವರು ಬೆಳೆದಿದ್ದಾರೆ. ಈಗ ಇಬ್ಬರ ಬಗ್ಗೆ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಬಗ್ಗೆ ದೇಶದಲ್ಲಿ ಚರ್ಚೆಯಾಗುತ್ತಿದೆ. ದೇಶದಲ್ಲಿ ಅವರ ಪ್ರಯತ್ನದಿಂದ ಕ್ರಾಂತಿಕಾರಿ ಬದಲಾವಣೆಗಳಾಗಿವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದ್ದು, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ, ಅಮಿತ್ ಷಾ ಗೃಹ ಮಂತ್ರಿ ಆಗಬೇಕು. ನಾನು ದೇಗುಲಕ್ಕೆ ಹೋದಾಗಲೆಲ್ಲ ಈ ಬಗ್ಗೆ ಪ್ರಾರ್ಥನೆ ಮಾಡುತ್ತೇನೆ ಎಂದರು.
ಮುಂದಿನ ದಿನಗಳಲ್ಲಿ 150 ಸ್ಥಾನ ಗೆಲ್ಲುವ ಮೂಲಕ ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುತ್ತೇವೆ” ಎನ್ನುವ ಮೂಲಕ ಆಪರೇಷನ್ ಕಮಲಕ್ಕೆ ಕೈ ಹಾಕಿ ಸರ್ಕಾರ ನಡೆಸುತ್ತಿರುವುದರ ಸಂಕಷ್ಟವನ್ನು ಪರೋಕ್ಷವಾಗಿ ಹೊರ ಹಾಕಿದರು. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಸ್ಪಷ್ಟ ಬಹುಮತದ ಸರ್ಕಾರ ತರುತ್ತೇವೆ ಎಂದು ಅಮಿತ್ ಷಾ ಅವರಿಗೆ ಭರವಸೆ ಕೊಡುತ್ತೇನೆ ಎಂದರು.
ಅಮಿತ್ ಷಾ ಅವರು ಭಾಷಣ ಪೂರ್ಣಗೊಳಿಸುತ್ತಿದ್ದಂತೆಯೇ ಸಚಿವ ಮುರುಗೇಶ್ ನಿರಾಣಿಯವರು ಷಾ ಮತ್ತು ಸಿಎಂ ಬಿ.ಎಸ್. ಯಡಿಯೂರಪ್ಪಗೆ ಬೆಳ್ಳಿ ಗದೆ ನೀಡಿ ಸಚಿವ ಮುರುಗೇಶ್ ನಿರಾಣಿ ಸನ್ಮಾನ ಮಾಡಿದರು. ಕಾರ್ಯಕ್ರಮದಲ್ಲಿ ವಿಜಯಪಥ, ನವಭಾರತದ ಹರಿಕಾರ ಪುಸ್ತಕ ಬಿಡುಗಡೆಗೊಳಿಸಿದರು. ವೇದಿಕೆ ಮೇಲೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಡಿಸಿಎಂ ಗೋವಿಂದ ಕಾರಜೋಳ, ಜಗದೀಶ್ ಶೆಟ್ಟರ್, ಬಿ ಸಿ ಪಾಟೀಲ್, ಆರ್ ಶಂಕರ್, ಉಮೇಶ್ ಕತ್ತಿ, ಶಶಿಕಲಾ ಜೊಲ್ಲೆ ಸೇರಿದಂತೆ ಶಾಸಕರು,ಸಂಸದರು ಭಾಗಿಯಾಗಿದ್ದರು.