ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಾಳು ಗೆಡವಿ, ಹಲ್ಲು ಕಿತ್ತ ಹಾವಿನಂತೆ ಮಾಡಿದ್ದ ಕರ್ನಾಟಕ ಲೋಕಾಯುಕ್ತ ಸಂಸ್ಥೆಯನ್ನು ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ಸಾಯಿಸಿದೆ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಳ್ಳಂದೂರು ಮತ್ತು ದೇವರಬೀಸನಹಳ್ಳಿ ಡಿನೋಟಿಫಿಕೇಶನ್ ಹಗರಣದಲ್ಲಿ ಯಡಿಯೂರಪ್ಪ ಅವರು ತಪ್ಪಿತಸ್ಥರೆಂದು ಸಾಕ್ಷ್ಯಗಳು ದೊರೆತರು ಲೋಕಾಯುಕ್ತ ಪೊಲೀಸರು ಈ ಪ್ರಕರಣದಲ್ಲಿ ನಾಲ್ಕು ವರ್ಷಗಳಿಂದ ತನಿಖೆ ನಡೆಸದೇ ಪ್ರಕರಣವನ್ನು ಬಾಕಿ ಇರಿಸಿಕೊಂಡು, ಈಗ ಪ್ರಕರಣವನ್ನು ಮುಕ್ತಾಯ ಮಾಡಲು ಹೊರಟಿರುವುದರ ಹಿಂದೆ ಯಡಿಯೂರಪ್ಪ ಹಾಗೂ ಗೃಹ ಸಚಿವ ಬೊಮ್ಮಾಯಿ ಅವರ ಕೈವಾಡವಿದೆ. ಹೀಗಾಗಿ ನಾಳೆ (ಜನವರಿ 20 ರಂದು) ಲೋಕಾಯುಕ್ತವನ್ನು ಸಾಯಿಸಿದ ಕಪ್ಪು ದಿನ ವನ್ನಾಗಿ ಆಚರಿಸಲಾಗುವುದು ಎಂದು ಮಾಹಿತಿ ನೀಡಿದರು.
ಬಿಜೆಪಿಯ ಮುಖ್ಯಮಂತ್ರಿಗಳನ್ನೇ ಜೈಲಿಗೆ ಕಳಿಸಿದ ಲೋಕಾಯುಕ್ತ ಸಂಸ್ಥೆಯನ್ನು ಪ್ರಬಲಗೊಳಿಸಿದರೆ ಸರ್ಕಾರದ ವೈದ್ಯಕೀಯ ಪರಿಕರಗಳ ಖರೀದಿ ಹಗರಣ, ಕೊರೊನಾ ಸಮಯದಲ್ಲಿ ನಡೆಸಿದ ಹಗರಣಗಳು, ಸೂಪರ್ ಸಿಎಂ ವಿಜಯೇಂದ್ರ ನಡೆಸುತ್ತಿರುವ ದಂಧೆಗಳು ಎಲ್ಲಿ ಮತ್ತೆ ಬಟಾಬಯಲಾಗುತ್ತವೆಯೋ ಎನ್ನುವ ಭಯದಿಂದ ಬಿಜೆಪಿಯವರು ಸಹ ಲೋಕಾಯುಕ್ತದ ಬಗ್ಗೆ ದಿವ್ಯ ಮೌನ ವಹಿಸಿದ್ದಾರೆ.
ಮಾಜಿ ಮುಖ್ಯಮಂತ್ರಿಗಳಾಗಿದ್ದ ದಿವಂಗತ ರಾಮಕೃಷ್ಣ ಹೆಗಡೆ ಅವರು 1983ರಲ್ಲಿ ಜಾರಿಗೆ ತಂದ, ಇಡೀ ದೇಶದಲ್ಲಿಯೇ ಮೊದಲ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯಾದ ಕರ್ನಾಟಕ ಲೋಕಾಯುಕ್ತ ಶಾಸನವು ಸ್ವತಂತ್ರ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯಾಗಿತ್ತು. ಅದಲ್ಲದೇ ಕೇಂದ್ರದ ಲೋಕಪಾಲ್ ಹಾಗೂ ಇತರ ರಾಜ್ಯಗಳಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಕಾನೂನುಗಳು ರೂಪಿತವಾಗಲು ಕರ್ನಾಟಕ ಹೆಮ್ಮೆಯ ಲೋಕಾಯುಕ್ತ ಸಂಸ್ಥೆ ಉತ್ತಮ ಉದಾಹರಣೆ ಹಾಗೂ ನಿದರ್ಶನವಾಗಿತ್ತು.
ರಾಜ್ಯ ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೇಗೌಡ ಮಾತನಾಡಿ, ವೆಂಕಟಾಚಲಯ್ಯ ಹಾಗೂ ನ್ಯಾಯಮೂರ್ತಿ ಸಂತೋಷ್ ಹೆಗಡೆ ಲೋಕಾಯುಕ್ತರಾಗಿದ್ದಾಗ ಈ ಸಂಸ್ಥೆ ಜನರ ಮನಸ್ಸಿನಲ್ಲಿ ಅಪಾರವಾದ ನಂಬಿಕೆ ಹಾಗೂ ಘನತೆಯನ್ನು ಗಳಿಸಿಕೊಂಡಿತ್ತು. ಆದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂತಹ ಘನತೆವೆತ್ತ ಸಂಸ್ಥೆಯನ್ನು ಹಾಳು ಮಾಡಿ ಭ್ರಷ್ಟಾಚಾರಿಗಳಿಗೆ ರತ್ನಗಂಬಳಿ ಹಾಸಿ ಕೊಟ್ಟು ಸಾವಿರಾರು ಕೋಟಿ ನುಂಗಲು ಆಸ್ಪದ ಮಾಡಿಕೊಟ್ಟರು. ಆಗ ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದ ಬಿಜೆಪಿ ಈಗ ಲೋಕಾಯುಕ್ತ ಸಂಸ್ಥೆಯನ್ನೇ ತನ್ನ ಕೈಗೊಂಬೆ ಮಾಡಿಕೊಂಡಿದೆ ಎಂದರು.
ಕಾಂಗ್ರೆಸ್ ಸರ್ಕಾರದ ಹಗರಣಗಳಾದ ಅರ್ಕಾವತಿ ಡಿನೋಟಿಫಿಕೇಶನ್, ರೀಡೂ ಹಗರಣ, 40 ಲಕ್ಷ ಬೆಲೆಬಾಳು ರೊಲೆಕ್ಸ್ ವಾಚ್ ಹಗರಣ, ಸಚಿವ ಆಂಜನೇಯ ಅವರ ಹಾಸಿಗೆ- ದಿಂಬು ಹಗರಣ ಸೇರಿದಂತೆ ವೈಟ್‌ಟಾಪಿಂಗ್, ನಗರೋಥ್ಥಾನ ಹಗರಣಗಳನ್ನು ಮರೆಮಾಚಲು ಸ್ಥಾಪಿಸಿದ, ಮುಖ್ಯಮಂತ್ರಿಗಳೇ ಮುಖ್ಯಸ್ಥರಾಗಿರುವ ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ಇದುವರೆಗೂ ಸಮರ್ಥವಾಗಿ ಒಂದೂ ತನಿಖೆಯನ್ನೂ ನಡೆಸಿಲ್ಲ ಎಂದರು.
ವಿಪಕ್ಷದಲ್ಲಿ ಇದ್ದಾಗ ನಾಮ್ ಕೇ ವಾಸ್ತೆಗೆ ಲೋಕಾಯುಕ್ತ ಬಲಹೀನಗೊಳಿಸುವುದನ್ನು ವಿರೋಧಿಸಿದ್ದ ಬಿಜೆಪಿಗೆ ತಾಕತ್ತಿದ್ದರೆ ಮತ್ತೆ ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸಿ ಎಂದು ಆಮ್ ಆದ್ಮಿ ಪಕ್ಷ ಸವಾಲು ಹಾಕಿದೆ.