ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಪಾಲಕರು ಮತ್ತು ಖಾಸಗಿ ಶಾಲೆಗಳ ನಡುವಿನ ಸಮಸ್ಯೆ ಬಗೆಹರಿಸದೆ, ಶಾಲೆಗಳು ಹಾಗೂ ಪೋಷಕರ ಜಟಾಪಟಿಗೆ ಸರ್ಕಾರದ ಆದೇಶ ಮುದ್ರೆ ಒತ್ತಿದ್ದಾರೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಎಂದು ಆಮ್ ಆದ್ಮಿ ಪಕ್ಷದ ಮುಖ್ಯ ವಕ್ತಾರ ಶರತ್ ಖಾದ್ರಿ ಆರೋಪಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶೇ.30 ರಷ್ಟು ಬೋಧನಾ ಶುಲ್ಕ ಕಡಿತ ಮಾಡಿ ಎಂದು ಕೇವಲ ಆದೇಶ ನೀಡುವುದಷ್ಟೇ ಸರ್ಕಾರದ ಕೆಲಸವಲ್ಲ, ಸಹಾಯಕ್ಕೆ ನಿಲ್ಲುವುದು. ಕೂಡ ಸಚಿವ ಮುಖ್ಯ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಶಾಲಾ ಆಡಳಿತ ಮಂಡಳಿ ಹಾಗೂ ಪೋಷಕರೇ ಶುಲ್ಕ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಹೇಳಿದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಒತ್ತಡಕ್ಕೆ ಮಣಿದು ಈಗ ಶೇ 30 ರಷ್ಟು ಬೋಧನಾ ಶುಲ್ಕ ಕಡಿಮೆ ಮಾಡಿರುವುದು ಸ್ವಾಗತಾರ್ಹ. ಆದರೆ ಈ ಪೋಷಕರ ಹಾಗೂ ಖಾಸಗಿ ಶಾಲೆಗಳ ಜಟಾಪಟಿಗೆ ಸರ್ಕಾರಿ ಆದೇಶ ನೀಡಿದೆಯೇ ಹೊರತು ಸಮಸ್ಯೆ ಬಗೆಹರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಂದು ಕಡೆ ಸಣ್ಣ, ಪುಟ್ಟ ಖಾಸಗಿ ಶಾಲೆಗಳು ಮುಚ್ಚಿಹೋಗುತ್ತಿವೆ, ಇದರಿಂದ ಪೋಷಕರು ಆತಂಕದಲ್ಲಿ ಇದ್ದಾರೆ. ಸರ್ಕಾರದಿಂದ ಖಾಸಗಿ ಶಾಲೆಗಳಿಗೆ ಇಂತಿಷ್ಟು ಸಹಾಯಧನ ಘೋಷಿಸಿ, ಆನಂತರ ಶುಲ್ಕ ಕಡಿತದ ಬಗ್ಗೆ ತೀರ್ಮಾನ ತೆಗೆದುಕೊಂಡಿದ್ದರೆ ಪೋಷಕರ ಹಾಗೂ ಖಾಸಗಿ ಶಾಲೆಗಳ ಜಗಳವನ್ನು ನಿಲ್ಲಿಸಬಹುದಿತ್ತು. ಆದರೆ ಈ ಆದೇಶದಿಂದ ಪರಿಸ್ಥಿತಿ ಮತ್ತಷ್ಟು ಜಟಿಲವಾಗಿದೆ ಎಂದರು.
ಸರ್ಕಾರಿ ಶಾಲೆಗಳು ಸಂಪೂರ್ಣ ವಿಶ್ವಾಸ ಕಳೆದುಕೊಂಡಿರುವ ಈ ಹೊತ್ತಿನಲ್ಲಿ ಲಕ್ಷಾಂತರ ಮಕ್ಕಳು ಖಾಸಗಿ ಶಾಲೆಗಳನ್ನೇ ನೆಚ್ಚಿಕೊಂಡಿವೆ. ಈಗ ಈ ಆದೇಶದ ವಿರುದ್ಧ ಖಾಸಗಿ ಶಾಲೆಗಳ ಒಕ್ಕೂಟ ನ್ಯಾಯಾಲಯಕ್ಕೆ ಹೋಗುವುದಾಗಿ ಹೇಳಿದೆ. ಇದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತದೆಯೇ ಹೊರತು ಏನೂ ಆಗುವುದಿಲ್ಲ. ಹೀಗೆ ಪೋಷಕರನ್ನು ಮುಗ್ದ ಮಕ್ಕಳನ್ನು ಗೋಳು ಹೋಯ್ದು ಕೊಳ್ಳುವ ನೀವು ಜವಾಬ್ದಾರಿಯುತ ಸ್ಥಾನದಲ್ಲಿ ಇರಲು ಅನರ್ಹರು ಎಂದರು.
ಸಂಪಂಗಿರಾಮ ನಗರ ವಾರ್ಡ್ ಅಧ್ಯಕ್ಷ ಪ್ರಕಾಶ್ ನೆಡುಂಗಡಿ ಮಾತನಾಡಿ, ಶಿಕ್ಷಣ ಸಚಿವರೇ ಶುಲ್ಕ ಕಡಿತ ಮಾಡಿದ ಮೇಲೆ ಶಾಲೆಗಳು ಅಲ್ಲಿನ ಸಿಬ್ಬಂದಿಗಳಿಗೆ ಸಂಬಳ ನೀಡುತ್ತವೆಯೇ ಎಂಬುದು ನಮ್ಮ ಪ್ರಶ್ನೆಯಾಗಿದೆ. ಶಾಲೆಗಳಿಗೆ ಸಹಾಯಧನ ನೀಡಿದ್ದರೇ, ಖಾಸಗಿ ಶಾಲೆಗಳಿಗೆ ಶೇ 50 ರಷ್ಟು ಶುಲ್ಕ ಕಡಿಮೆ ಮಾಡಿ ಎಂದು ಹೇಳಬಹುದಿತ್ತು, ಆದರೆ ಈಗ ಇದಕ್ಕೆ ಅವಕಾಶವೇ ಇಲ್ಲ ಎಂದರು.