ವಿಜಯಪಥ ಸಮಗ್ರ ಸುದ್ದಿ
ತಿ.ನರಸೀಪುರ: ಬೆಂಗಳೂರಿನ ನ್ಯಾಯಾಲಯದಲ್ಲಿ ಸಾಹಿತಿ ಕೆ.ಎಸ್.ಭಗವಾನ್ ಅವರ ಮುಖಕ್ಕೆ ವಕೀಲೆ ಮೀರಾ ರಾಘವೇಂದ್ರ ಮಸಿ ಬಳಿದು ಅಪಮಾನ ಮಾಡಿರುವ ಘಟನೆಯನ್ನು ಖಂಡಿಸಿ, ಕೂಡಲೇ ಆಕೆಯನ್ನು ಬಂಧಿಸಿ ದೇಶದಿಂದಲೇ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ತಾಲೂಕು ಕಚೇರಿ ಮುಂಭಾಗದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಮುಂಭಾಗ ತಾಲೂಕು ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ತಾಲೂಕು ಕಚೇರಿ ಮುಂಭಾಗದ ಉದ್ಯಾನವನದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಬಳಿ ಜಮಾವಣೆಗೊಂಡ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಬೆಂಗಳೂರು ನಗರ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಸಾಹಿತಿ ಕೆ.ಎಸ್.ಭಗವಾನ್ ಅವರ ಮೇಲೆ ವಕೀಲೆ ದಾಳಿ ಮಾಡಿ, ಮುಖಕ್ಕೆ ಮಸಿ ಬಳಿದ ಮನುವಾದಿಗಳ ಷಡ್ಯಂತ್ರವನ್ನು ತೀವ್ರವಾಗಿ ಖಂಡಿಸಿ, ಘನತವೆತ್ತ ನ್ಯಾಯಾಲಯದಲ್ಲಿ ವಕೀಲೆಯೋರ್ವಳ ಪುಂಡಾಟದ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನಾ ಧರಣಿ ಪ್ರಾರಂಭಿಸಿದರು.
ರಾಜ್ಯ ಕಂಡಂತಹ ಬುದ್ಧಿಜೀವಿಗಳು, ವಿಮರ್ಶಕ ಹಾಗೂ ಸಂಶೋಧಕರು ಆದಂತಹ ಹಿರಿಯ ಸಾಹಿತಿ ಕೆ.ಎಸ್.ಭಗವಾನ್ ಅವರು ಹಿಂದೂ ಧರ್ಮದೊಳಗಿನ ಮನುವಾದಿಗಳ ಅಸಮಾನತೆ, ಜಾತೀಯತೆ, ಮೂಢನಂಬಿಕೆ ಮತ್ತು ಅಸತ್ಯವನ್ನು ವಿಶ್ಲೇಷಣೆ ಮಾಡುತ್ತಿರುವುದನ್ನೇ ತಪ್ಪಾಗಿ ಅರ್ಥೈಸಿರುವ ಮನುವಾದಿಗಳು ಪ್ರಗತಿಪರರು ಮತ್ತು ವೈಚಾರಿಕತೆ ಚಿಂತನೆಗಳನ್ನು ಬಗ್ಗುಪಡಿಯಲು ಮೀರಾ ರಾಘವೇಂದ್ರ ಅವರಂತಹ ಮಹಿಳೆಯನ್ನು ಛೂ ಬಿಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ನಂತರ ತಹಸೀಲ್ದಾರ್ ಡಿ.ನಾಗೇಶ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಒಕ್ಕೂಟದ ತಾಲೂಕು ಸಂಚಾಲಕ ಡಾ.ಆಲಗೂಡು ಎಸ್.ಚಂದ್ರಶೇಖರ್, ಸಂಘಟನಾ ಸಂಚಾಲಕರಾದ ಎಸ್.ಆರ್.ಶಶಿಕಾಂತ್ ಸೋಸ್ಲೆ, ಮಂಜುನಾಥ ತುಂಬಲ, ಬನ್ನಹಳ್ಳಿ ಸೋಮಣ್ಣ, ಸುರೇಶ ಯರಗನಹಳ್ಳಿ, ಕೆಂಪಯ್ಯನಹುಂಡಿ ರಾಜು, ನಾಗರಾಜು ವಾಟಾಳು, ಮುಖಂಡರಾದ ಆಲಗೂಡು ಶಿವಣ್ಣ, ಕುಕ್ಕೂರು ರಾಜು, ಚಿಕ್ಕವೀರಯ್ಯ, ಸೋಸಲೆ ನಂಜುಂಡಸ್ವಾಮಿ, ಬಸವರಾಜು, ಪುಟ್ಟಸ್ವಾಮಿ, ಕೊಳತ್ತೂರು ಪಿ.ಮಹದೇವಸ್ವಾಮಿ, ಮಧುಸೂದನ್, ಮಹದೆವಸ್ವಾಮಿ, ಕನ್ನಾಯಕನಹಳ್ಳಿ ಮರಿಸ್ವಾಮಿ, ಮನೋಜ್ ಕುಮಾರ್ ಹಾಗೂ ಇನ್ನಿತರರು ಭಾಗವಹಿಸಿದ್ದರು.