ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಡಿಸೆಂಬರ್ ಮತ್ತು ಜನವರಿ ತಿಂಗಳುಗಳ ವೇತನದಲ್ಲಿ ಅರ್ಧ ವೇತನವನ್ನು ನೀಡಿ ಕೈ ಕಟ್ಟಿಕೂತಿರುವ ಸರ್ಕಾರ ಮತ್ತು ಸಾರಿಗೆ ಸಂಸ್ಥೆ ವಿರುದ್ಧ ಸಾರಿಗೆ ನೌಕರರ ನಾಳೆ ಪ್ರತಿಭಟನೆ ನಡೆಸಲಿದ್ದಾರೆ.
ಹೌದು ಕಳೆದ ಡಿಸೆಂಬರ್ 10ರಿಂದ 14ರವರೆಗೆ ನಾಲ್ಕು ದಿನಗಳು ಸಾರಿಗೆ ನೌಕರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸಿದ್ದರು. ವೇಳೆ ಕೊಟ್ಟ ಮಾತನ್ನು ಸರ್ಕಾರ ಈಡೇರಿಸಿಲ್ಲ. ಡಿಸೆಂಬರ್ ವೇತನ ಮತ್ತು ಜನವರಿ ವೇತನವೂ ಪೂರ್ಣ ಪ್ರಮಾಣದಲ್ಲಿ ಕೈಸೇರಿಲ್ಲ. ಹೀಗಾಗಿ ಮತ್ತೆ ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸುವುದು ಅನಿವಾರ್ಯವಾಗಿದೆ ಎಂದು ನೌಕರರು ಹೇಳಿದ್ದಾರೆ.
ನಾಳೆ (ಫೆ.10) ಶಾಂತಿನಗರದಲ್ಲಿರುವ ಸಂಸ್ಥೆಯ ಕೇಂದ್ರ ಕಚೇರಿ ಎದುರು ಪ್ರತಿಭಟನೆ ನಡೆಸಲು ಎಲ್ಲಾ ಸಾರಿಗೆ ಸಂಘಟನೆಗಳು ನಿರ್ಧರಿಸಿವೆ. ಹೀಗಾಗಿ ನಾಳೆ ಬಸ್ ಎಂದಿನಂತೆ ಇದ್ದರು ಪ್ರತಿಭಟನೆಯ ತೀವ್ರತೆ ಮೇಲೆ ಬಸ್ ಸಂಚಾರವು ನಿರ್ಧಾರವಾಗಲಿದೆ ಎಂದು ಹೇಳಿದ್ದಾರೆ.
ಇನ್ನೂ ಕಳೆದ ಬಾರಿ ಮುಷ್ಕರದ ವೇಳೆ ಸರ್ಕಾರ 9 ಬೇಡಿಕೆಗಳನ್ನು ಪರಿಷ್ಕರಿಸಿದೆ. ಆದರೆ ನಮ್ಮ ಪ್ರಮುಖ ಬೇಡಿಕೆಯಾದ ಸಾರಿಗೆ ನೌಕರರನ್ನು ಸರ್ಕಾರಿ ನೌಕರರ ಪರಿಗಣಿಸಬೇಕೆಂಬ ಬೇಡಿಕೆ ಮಾತ್ರ ಘೋಷಣೆಯಾಗಿಲ್ಲ. ಜತೆಗೆ 6ನೇ ವೇತನ ಆಯೋಗ ಜಾರಿ 2020ರ ಜನವರಿಯಿಂದ ಅನ್ವಯಿಸಲಿದ್ದು, ಮಾರ್ಚ್ 21ರಿಂದ ವೇತನಕ್ಕೆ ಸೇರಿಸಲಾಗುವುದು ಎಂದು ತಿಳಿಸಲಾಯಿತು ಆದರೆ ಆ ಯಾವ ಬೇಡಿಕೆಗಳು ಇನ್ನೂ ಈಡೇರಿಲ್ಲ ಎಂದು ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೊತೆಗೆ ನೌಕರರಿಗೆ ನಿತ್ಯ ಕಿರುಕುಳಗಳು ಹೆಚ್ಚಾಗುತ್ತಲೇ ಇವೆ. ಹೀಗಾಗಿ ಕಿರುಕುಳ ತಪ್ಪಿಸಲು ಈ ಎಲ್ಲ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ಮತ್ತು ಸಾರಿಗೆ ಸಚಿವರು ಸಂಪೂರ್ಣ ವಿಫಲರಾಗಿದ್ದು, ಈ ಹಿನ್ನೆಲೆಯಲ್ಲಿ ಮುಷ್ಕರ ನಡೆಸುವುದು ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.
ಇನ್ನಾದರೂ ತಮ್ಮ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮುಂದಾಗದಿದ್ದರೆ ಪ್ರತಿಭಟನೆ ಮಾರ್ಗ ಬಿಟ್ಟರೆ ನಮಗೆ ಅನ್ಯಮಾರ್ಗ ಕಾಣುತ್ತಿಲ್ಲ. ಆದ್ದರಿಂದೀ ವೇಳೆ ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಆದ್ದರಿಂದ ಸಾರ್ವಜನಿಕರು ತಮ್ಮ ಸಮಸ್ಯೆಯನ್ನು ಆಲಿಸಿ ನಿಮಗಾಗುತ್ತಿರುವ ತೊಂದರೆಯನ್ನು ಸಹಿಸಿಕೊಳ್ಳಬೇಕು ಎಂದು ನಾವು ವಿನಂತಿಸಿಕೊಳ್ಳುತ್ತೇವೆ ಎಂದು ನೌಕರರು ಮನವಿ ಮಾಡಿದ್ದಾರೆ.