ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗಿ ಆಗುತ್ತಿರುವುದನ್ನು ಖಂಡಿಸಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಬೆಂಗಳೂರಿನಲ್ಲಿಂದು ಪ್ರತಿಭಟನೆ ನಡೆಸಿದರು.
ನಿತ್ಯ ಜನಸಾಮಾನ್ಯರು ಬಳಸುವ ಪೆಟ್ರೋಲ್ ಡೀಸೆಲ್ ಬೆಲೆಯನ್ನು ಗಗನಕ್ಕೇರಿಸಿರುವ ಕೇಂದ್ರ ಸರ್ಕಾರ, ಬೆಲೆ ನಿಯಂತ್ರಣಕ್ಕೆ ತರುವಲ್ಲಿ ವಿಫಲವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದರು.
ಇಂದು ಪೆಟ್ರೋಲ್ ಬೆಲೆ 90 ರೂ. ಗಡಿದಾಟಿದ್ದು ಇದು ಹೀಗೆಯೇ ಮುಂದುವರಿದರೆ ಒಂದುವಾರ ಕಳೆಯುವ ಮುನ್ನವೇ 100 ರೂ. ಗಡಿ ದಾಟಲಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚ ಇಂಧನ ದರ ಕಡಿಮೆ ಇದ್ದು, ನಮಗೆ ಕೇವಲ 40-50 ರೂ.ಗಳಲ್ಲೇ ಪೆಟ್ರೋಲ್ ಮಾರಾಟ ಮಾಡಬೇಕು ಆದರೆ ಕೇಂದ್ರ ಸರ್ಕಾರ 91 ರೂ. ಸುಲಿಗೆ ಮಾಡುವ ಮೂಲಕ ಜನರ ಜೇಬಿಗೆ ನೇರವಾಗಿ ಕತ್ತರಿಹಾಕುತ್ತಿದೆ ಎಂದು ಕಿಡಿಕಾರಿದರು.
ಇಂಧನ ತೈಲ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವುದನ್ನು ಖಂಡಿಸಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ನಗರದ ಮೈಸೂರು ಬ್ಯಾಂಕ್ ವೃತ್ತದ ಸಾವಿರಾರು ಸಂಖ್ಯೆಯಲ್ಲಿ ಜಮಾವಣೆಗೊಂಡು ಬೃಹತ್ ಪ್ರತಿಭಟನೆ ಮಾಡಿದರು.
ಚಟ್ಟದ ಮೇಲೆ ಬೈಕ್ ಶವಯಾತ್ರೆ ಮಾಡಿದ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಜೊತೆಗೆ ರಾಜ್ಯ ಸರ್ಕಾರ ಕೂಡ ಇದನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ತಮ್ಮ ಸಿಟ್ಟನ್ನು ಹೊರಹಾಕಿದರು.
ರಸ್ತೆಯಲ್ಲೇ ಸೌದೆ ಒಲೆಮೇಲೆ ಅಡುಗೆ ಮಾಡಿದ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರು ರಸ್ತೆಯಲ್ಲೆ ಊಟ ಬಡಿಸುವ ಮೂಲಕ ಇಂಧನ ಬೆಲೆಯನ್ನು ಖಡಿಸಿದರು.