ವಿಜಯಪಥ ಸಮಗ್ರ ಸುದ್ದಿ
ಪಿರಿಯಾಪಟ್ಟಣ: ಜಿಲ್ಲಾಧಿಕಾರಿಗಳ ಆದೇಶಕ್ಕೂ ಬೆಲೆ ನೀಡದೆ ದಲಿತ ವಿದ್ಯಾರ್ಥಿಯನ್ನು ಶಾಲೆಗೆ ದಾಖಲು ಮಾಡಿಕೊಳ್ಳದೆ ಹುಂಬುತನ ಪ್ರದರ್ಶಿಸುತ್ತಿರುವ ತಾಲೂಕಿನ ಗಿರುಗೂರಿನ ಮಿಳಿಂದ ವಿದ್ಯಾ ಸಂಸ್ಥೆ ಪರವಾನಗಿ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ದಸಂಸ ಕಾರ್ಯಕರ್ತರು ಶಾಲೆಯ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ನೇತೃತ್ವ ವಹಿಸಿದ್ದ ತಾಪಂ ಸದಸ್ಯ ರಾಮು ಮಾತನಾಡಿ, ದಲಿತ ಮುಖಂಡ, ಆರ್‌ಟಿಐ ಕಾರ್ಯಕರ್ತ ಮಲ್ಲಿಕಾರ್ಜುನ ಎಂಬುವವರು ಮಿಳಿಂದ ಶಾಲೆಯಲ್ಲಿನ ಅಕ್ರಮಗಳ ಬಗ್ಗೆ ಡೇರಾ ಕಮಿಟಿಗೆ ದೂರು ನೀಡಿದ್ದರು ಎಂಬ ಕಾರಣಕ್ಕೆ ಇವರ ಮಗ ಯತೀಶ್ ಎಂಬ ವಿದ್ಯಾರ್ಥಿಗೆ ಶಾಲೆಗೆ ಪ್ರವೇಶಾತಿ ನೀಡದೆ ವರ್ಗಾವಣೆ ಪತ್ರ ನೀಡಿ ಶಾಲೆಯಿಂದ ಹೊರ ಹೋಗುವಂತೆ ಒತ್ತಡ ಏರಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರಿಂದ ಜಿಲ್ಲಾಧಿಕಾರಿಗಳು ವಿದ್ಯಾರ್ಥಿಗೆ ಪ್ರವೇಶಾತಿ ನೀಡುವಂತೆ ಆದೇಶ ಮಾಡಿದ್ದರೂ ಶಾಲೆಯ ಆಡಳಿತ ಮಂಡಳಿ ವಿದ್ಯಾರ್ಥಿಯನ್ನು ದಾಖಲು ಮಾಡಿಕೊಳ್ಳುತ್ತಿಲ್ಲ. ಆದ್ದರಿಂದ ಶಾಲೆಯ ಆಡಳಿತ ಮಂಡಳಿಯನ್ನು ರದ್ದುಗೊಳಿಸುವುದು ಸೂಕ್ತ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರ್‌ಟಿಐ ಕಾರ್ಯಕರ್ತ ಮಲ್ಲಿಕಾರ್ಜುನ ಮಾತನಾಡಿ, ಶಾಲೆಯು ಸರ್ಕಾರಿ ಅನುದಾನಿತ ಶಾಲೆಯಾಗಿದ್ದು ಸರ್ಕಾರಿ ಮತ್ತು ಗ್ರಾಮ ಠಾಣಾ ಜಾಗದಲ್ಲಿ ಕಟ್ಟಡ ನಿರ್ಮಿಸಿ ಶಾಲೆ ನಡೆಸುತ್ತಿದೆ. ಹೀಗಿದ್ದರೂ ಸಂಸ್ಥೆಯವರು ಸರ್ಕಾರದ ಯಾವುದೇ ಆದೇಶವನ್ನು ಪಾಲಿಸದೆ ವಿದ್ಯಾರ್ಥಿ ಮತ್ತು ಪೋಷಕರನ್ನು ಸುಲಿಗೆ ಮಾಡುವುದಲ್ಲದೆ, ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದರು. ಇದನ್ನು ತಿಳಿದ ನಾನು ಡೇರಾ ಕಮಿಟಿಗೆ ದೂರು ನೀಡಿದ್ದೆ. ಇದರಿಂದ ಸಂಸ್ಥೆಯವರು ನನ್ನ ಮಗನಿಗೆ ಕಿರುಕುಳ ನೀಡುತ್ತಿರುವುದಲ್ಲದೆ ಪ್ರವೇಶಾತಿಯನ್ನು ನೀಡುತ್ತಿಲ್ಲ. ನನ್ನ ಪುತ್ರ ಯತೀಶ್ ಇದೇ ಶಾಲೆಯಲ್ಲಿ 7ನೇ ತರಗತಿ ತೇರ್ಗಡೆ ಹೊಂದಿದ್ದು, 8ನೇ ತರಗತಿಗೆ ದಾಖಲಿಸಿಕೊಳ್ಳಲು ಶಾಲೆಯ ಆಡಳಿತ ಮಂಡಳಿ ನಿರಾಕರಿಸಿದ್ದರಿಂದ, ಪ್ರತಿಭಟನೆ ನಡೆಸುತ್ತಿರುವುದಾಗಿ ತಿಳಿಸಿದರು.
ಆಡಳಿತ ಮಂಡಳಿ ವಿರುದ್ದ ಕ್ರಮಕ್ಕೆ ಮುಂದಾದ ತಹಸೀಲ್ದಾರ್
ಮಿಳಿಂದ ಶಾಲೆಯ ಆವರಣಲ್ಲಿ ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಶ್ವೇತಾ ಎನ್.ರವೀಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ ಹಾಗೂ ಪಿರಿಯಾಪಟ್ಟಣ ಪಿಎಸ್ಐ ಸದಾಶಿವ ತಿಪರೆಡ್ಡಿ ಭೇಟಿ ನೀಡಿ, ಪ್ರತಿಭಟನಾ ನಿರತರನ್ನು ಕುರಿತು ಮಾತನಾಡುತ್ತಾ ಶಾಲೆಗೆ ವಿದ್ಯಾರ್ಥಿಯನ್ನು ದಾಖಲು ಮಾಡಿಕೊಳ್ಳದ ಆಡಳಿತ ಮಂಡಳಿ ವಿರುದ್ಧ ದೂರು ನೀಡಿದ್ದರಿಂದ ಜಿಲ್ಲಾಧಿಕಾರಿಗಳು ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೆಶಕರು ಕೂಡಲೇ ವಿದ್ಯಾರ್ಥಿನ್ನು ಶಾಲೆಗೆ ದಾಖಲು ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ.
ಆದ್ದರಿಂದ ಶಾಲೆಯ ಆಡಳಿತ ಮಂಡಳಿ ವಿದ್ಯಾರ್ಥಿಗೆ ಪ್ರವೇಶಾತಿ ನೀಡಬೇಕು ಇದನ್ನು ಬಿಟ್ಟು ಉದ್ದಟತನ ಪ್ರದರ್ಶಿಸಿದರೆ ಶಾಲೆಗೆ ಬೀಗ ಜಡಿಯಲಾಗುವುದು. ಈ ಬಗ್ಗೆ ಶಾಲೆಯ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಲಾಗಿದ್ದು. ಬುಧವಾರ ಸಂಜೆ 5 ಗಂಟೆಯ ವರೆಗೂ ಅವಕಾಶ ಸಮಯ ನೀಡಲಾಗದೆ ತಪ್ಪಿದ್ದಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಶಾಲಾ ಆಡಳಿತ ಮಂಡಳಿ ರದ್ದುಗೊಳಿಸಿ ಶಾಲೆಗೆ ಬೀಗ ಹಾಕಲಾಗುವುದು ಎಂದರು.
ಪ್ರತಿಭಟನನೆಯಲ್ಲಿ ಕೊಪ್ಪ ಗ್ರಾ.ಪಂ.ಸದಸ್ಯರಾದ ಸುರೇಶ್, ರಿಯಾಜ್, ದಸಂಸ ಮುಖಂಡರಾದ ತಮ್ಮಣ್ಣಯ್ಯ, ಬಿ.ಶಿವಣ್ಣ, ಶಿವರಾಜ್, ಚೆಲುವರಾಜ್, ಧನರಾಜ್, ಭೀಮ್ ಆರ್ಮಿ ಗಿರೀಶ್, ತಿಮಕಾಪುರ ಹರೀಶ್, ಶಫಿವುಲ್ಲಾ ಖಾನ್, ಪುಟ್ಟಸ್ವಾಮಿ, ಶಿವರಾಜ್, ಪೂರ್ಣಿಮಾ, ಚನ್ನಮ್ಮ, ಸುಜಾತಾ, ಆಶಾ ಮತ್ತಿತರರು ಇದ್ದರು.