ವಿಜಯಪಥ ಸಮಗ್ರ ಸುದ್ದಿ
ಬಾಗಲಕೋಟೆ: ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಸಿರಿ ಧಾನ್ಯಗಳ ಸಂಸ್ಕರಿತ, ಮೌಲ್ಯವರ್ಧಿತ ಗುಣಮಟ್ಟದ ಉತ್ಪನ್ನಗಳನ್ನು ನಿರಂತರವಾಗಿ ಗ್ರಾಹಕರಿಗೆ ಒದಗಿಸುವ ಸಲುವಾಗಿ ಹಾಗೂ ಮಾರುಕಟ್ಟೆಯ ಬಲವರ್ಧನೆಗಾಗಿ ಸಂಸ್ಕರಣೆ, ಮೌಲ್ಯವರ್ದನೆ, ವರ್ಗಿಕರಣ, ಪ್ಯಾಕಿಂಗ್ ಮತ್ತು ಬ್ರಾಂಡಿಂಗ್ ಘಟಕಗಳಿಗೆ ಪ್ರೋತ್ಸಾಹಧನ ನೀಡುವ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದೆ.
ಸಿರಿಧಾನ್ಯಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು, ರೈತರು ಬೆಳೆದ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರಕಿಸಿಕೊಡಲು ಹಾಗೂ ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಉದ್ಯೋಗವಕಾಶ ಸೃಷ್ಟಿಸಲು ಮತ್ತು ಕೃಷಿ ಉತ್ಪನ್ನಗಳು ಪೋಲಾಗುವುದನ್ನು ತಡೆಯಲು ಸಾವಯವ ಮತ್ತು ಶೂನ್ಯ ಬಂಡವಾಳ ಕೃಷಿ ಉತ್ಪನ್ನ ಸಂಸ್ಕರಣೆ, ಮೌಲ್ಯ ವರ್ಧನೆ, ವರ್ಗಿಕರಣ, ಪ್ಯಾಕಿಂಗ್ ಮತ್ತು ಬ್ರಾಂಡಿಂಗ್ ಘಟಕಗಳಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ. CFTRI/ IIMR/ICRISAT/NIFTEM/DFRL ಸಂಸ್ಥೆಗಳ ತಂತ್ರಜ್ಞಾನ ಅಳವಡಿಸಿ ತಯಾರಿಸಿದ ಯಂತ್ರೋಪಕರಣಗಳಿಗೆ ಪ್ರೋತ್ಸಾಹಧನ ನೀಡಲಾಗುವುದು.
ಈ ಕಾರ್ಯಕ್ರಮದಡಿ ನೋಂದಾಯಿತವಲ್ಲದ ಗುಂಪುಗಳಾದ ರೈತ ಶಕ್ತಿ ಗುಂಪುಗಳು, ಸ್ವಸಹಾಯ ಗುಂಪುಗಳು, ಸ್ಥಳೀಯ ಉದ್ದಿಮೆದಾರರು, ಪ್ರಗತಿಪರ ರೈತರು, ಹೊಸದಾಗಿ ಅಥವಾ ಈಗಾಗಲೇ ಇರುವ ಸಂಸ್ಕರಣಾ ಘಟಕಗಳ ಜೊತೆಗೆ ಕೃಷಿ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ, ವರ್ಗಿಕರಣ, ಪ್ಯಾಕಿಂಗ್ ಮತ್ತು ಬ್ರಾಂಡಿಂಗ್ ಘಟಕಗಳಿಗೆ ಒಟ್ಟು ವೆಚ್ಚದ ಮೇಲೆ ಪ್ರೋತ್ಸಾಹಧನವಾಗಿ ಎಲ್ಲ ವರ್ಗದವರು ಶೇ.50 ರಷ್ಟು ಅಥವಾ ಗರಿಷ್ಠ 2 ಲಕ್ಷ ರೂ.ಗಳವರೆಗೆ ಪಡೆಯಬಹುದಾಗಿದೆ.
ಏಪ್ರಿಲ್ 1ರ ನಂತರದ ದಿನಾಂಕದಲ್ಲಿ ಖರೀದಿಸಿ ಅಳವಡಿಸಿದ ಘಟಕಗಳಿಗೆ ಮಾತ್ರ ಪ್ರೋತ್ಸಾಹಧನ ನೀಡಲಾಗುವುದು. ಅರ್ಜಿ ಸಲ್ಲಿಸುವ ಕೊನೆ ದಿನ ಫೆಬ್ರವರಿ 25 ಆಗಿದೆ.
ಖರೀದಿಸಿದ ಘಟಕಗಳು ಕಡ್ಡಾಯವಾಗಿ ISI/ISO ಮಾರ್ಕ ಹೊಂದಿರಬೇಕು. ಆಸಕ್ತರು ತಮ್ಮ ಸಮೀಪದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಆರ್ಥಿಕ ನೆರವಿಗಾಗಿ ಅವಶ್ಯಕವಾಗಿ ಸಲ್ಲಿಸಬೇಕಾದ ದಾಖಲೆಗಳು, ಅನುದಾನ ಬಿಡುಗಡೆ ಮಾದರಿ ಹಾಗೂ ಯೋಜನಾ ಮಾರ್ಗಸೂಚಿಯಿಂದ ಪಡೆದುಕೊಳ್ಳುವಂತೆ ಕೃಷಿ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.