ವಿಜಯಪಥ ಸಮಗ್ರ ಸುದ್ದಿ
ಮೈಸೂರು: ಮೈಸೂರು ಮಹಾನಗರ ಪಾಲಿಕೆ ಮೇಯರ್ ಆಗಿ ಜೆಡಿಎಸ್‌ನ ರುಕ್ಮಿಣಿ ಮಾದೇಗೌಡ ಮತ್ತು ಉಪ ಮೇಯರ್ ಆಗಿ ಕಾಂಗ್ರೆಸ್‌ನ ಅನ್ವರ್ ಬೇಗ್ ಆಯ್ಕೆಯಾಗಿದ್ದಾರೆ.
ಇಂದು ಪಾಲಿಕೆಯ ಕೌನ್ಸಿಲ್ ಹಾಲ್‌ನಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ರುಕ್ಮಿಣಿ ಅವರ ಪರವಾಗಿ ಕಾಂಗ್ರೆಸ್ ಸದಸ್ಯರು ಕೈ ಎತ್ತಿದ್ದರಿಂದ ರುಕ್ಮಿಣಿ ಅವರು ಮೇಯರ್ ಆಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ಅಧಿಕೃತ ಘೋಷಣೆ ಮಾಡಿದರು.
ಮೂರೂ ಪಕ್ಷಗಳು ಚುನಾವಣೆಯಲ್ಲಿ ಸ್ವತಂತ್ರವಾಗಿ ಕಣಕ್ಕಿಳಿದಿದ್ದವು. ಹೀಗಾಗಿ ಈ ಚುನಾವಣೆ ಮೂರು ಪಕ್ಷಗಳ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿತ್ತು. ಆದರೆ ಅಂತಿಮವಾಗಿ ಬಿಜೆಪಿಯನ್ನು ಬಗ್ಗು ಬಡಿಯುವ ಉದ್ದೇಶದಿಂದ ಕಾಂಗ್ರೆಸ್ ಸದಸ್ಯರು ಜೆಡಿಎಸ್ ಮೇಯರ್ ಅಭ್ಯರ್ಥಿ ಪರ ಕೈ ಎತ್ತುವ ಮೂಲಕ ತಮ್ಮ ಓಟು ಹಾಕಿದರು. ಹೀಗಾಗಿ ಕೊನೆ ಕ್ಷಣದಲ್ಲಿ ಜೆಡಿಎಸ್ ಮೇಯರ್ ಪಟ್ಟ ಅಲಂಕರಿಸುವ ಮೂಲಕ ವಿಜಯದ ನಗೆ ಬೀರಿ ಹಿಗ್ಗಿದೆ.
ಯಾವ ಪಕ್ಷಕ್ಕೂ ಬಹುಮತವಿಲ್ಲದ ಕಾರಣ ಕಾಂಗ್ರೆಸ್ ಮತ್ತು ಬಿಜೆಪಿಗೆ ಜೆಡಿಎಸ್ ದೋಸ್ತಿ ಅವಶ್ಯಕವಾಗಿತ್ತು. ಹೀಗಾಗಿ ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಕಿಂಗ್ ಮೇಕರ್ ಆಗಲಿದೆ ಎಂದು ಭಾವಿಸಲಾಗಿತ್ತು. ಆದರೆ ಕೊನೆಯವರೆಗೂ ಮೈತ್ರಿಯನ್ನು ಬಿಟ್ಟುಕೊಡದ ಜೆಡಿಎಸ್ ತಾನೇ ಗೆದ್ದು ಎಲ್ಲರಲ್ಲೂ ಅಚ್ಚರಿಯನ್ನು ಮೂಡಿಸಿತು.
ಚುನಾವಣಾ ಅಧಿಕಾರಿಯಾಗಿ ಜಿ.ಸಿ.ಪ್ರಕಾಶ್ ಮತ್ತು ಆಯುಕ್ತೆ ಶಿಲ್ಪನಾಗ್ ಅವರ ನೇತೃತ್ವದಲ್ಲಿ ಚುನಾವಣೆ ನಡೆಯಿತು. ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ರಾಮದಾಸ್, ಎಲ್. ನಾಗೇಂದ್ರ, ಮರಿತಿಬ್ಬೇಗೌಡ ಮತ್ತು ಕೆ.ಟಿ.ಶ್ರೀಕಂತೇಗೌಡ ಅವರು ಚುನಾವಣೆಯಲ್ಲಿ ಭಾಗಿಯಾಗಿದ್ದರು.
ಚುನಾವಣೆ ಪ್ರಕ್ರಿಯೆ
ಜೆಡಿಎಸ್, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಮೈಸೂರು ಮೇಯರ್ ಮತ್ತು ಉಪ ಮೇಯರ್ ಸ್ಥಾನಕ್ಕೆ ಪ್ರತ್ಯೇಕ ನಾಮಪತ್ರ ಸಲ್ಲಿಸಿದವು. ಮೇಯರ್ ಸ್ಥಾನಕ್ಕೆ ಬಿಜೆಪಿಯ ಸುನಂದ ಪಾಲನೇತ್ರ ನಾಮಪತ್ರ ಸಲ್ಲಿಸಿದರೆ, ಸಾತ್ವಿಕ್ ಸಂದೇಶ್‌ಸ್ವಾಮಿ ಅವರು ಉಪ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ನಿಂದ ಮೇಯರ್ ಸ್ಥಾನಕ್ಕೆ ಶಾಂತಕುಮಾರಿ ಮತ್ತು ಉಪ ಮೇಯರ್ ಸ್ಥಾನಕ್ಕೆ ಅನ್ವರ್ ಬೇಗ್ ಅವರು ನಾಮಪತ್ರ ಸಲ್ಲಿಸಿದ್ದರು.
ರುಕ್ಮಿಣಿ ಮಾದೇಗೌಡ ಜೆಡಿಎಸ್ ನಿಂದ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಆದರೆ ಜೆಡಿಎಸ್‌ನಿಂದ ಉಪಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಪ್ರತ್ಯೇಕವಾಗಿ ಚುನಾವಣಾ ಕಣಕ್ಕೆ ಇಳಿದಿದ್ದರು. ಈ ನಡುವೆ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಮೇಯರ್ ಸ್ಥಾನ ಅಲಂಕರಿಸಲು ಬಿಜೆಪಿ ಪ್ರಯತ್ನ ನಡೆಸಿತ್ತು. ಆದರೆ ಅದರ ಪ್ರಯತ್ನ ವಿಫಲವಾಯಿತು. ಹೀಗಾಗಿ ಮೈಸೂರಿನ ಮೊದಲ ಪ್ರಜೆಯಾಗಬೇಕು ಎಂದು ಮೂರು ಪಕ್ಷಗಳ ನಡುವೆ ಜಿದ್ದಾಜಿದ್ದಿನ ಹೋರಾಟ ಪ್ರಾರಂಭವಾಯಿತು.
ಜೆಡಿಎಸ್ ಮೇಯರ್ ಅಭ್ಯರ್ಥಿ ರುಕ್ಮಿಣಿ ಮಾದೇಗೌಡ ಅವರನ್ನು ಕಾಂಗ್ರೆಸ್ ಸದಸ್ಯರು ಅಂತಿಮಾವಿ ಬೆಂಬಲಿಸಿದ್ದರಿಂದ ಮೇಯರ್ ಪಟ್ಟ ಜೆಡಿಎಸ್ ಪಾಲಾಯಿತು. ಈ ಮೂಲಕ ಕೊನೆಯ ಕ್ಷಣದಲ್ಲಿ, ಕೈ ಸದಸ್ಯರು ಮೇಯರ್ ಚುನಾವಣೆಗೆ ಒಂದು ತಿರುವನ್ನು ನೀಡಿದರು. ಹೀಗಾಗಿ ಬಿಜೆಪಿಯ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾದವು. ಬಿಜೆಪಿ ಇದೇ ಮೊದಲ ಬಾರಿಗೆ ಮೈಸೂರು ಮೇಯರ್ ಪಕ್ಷ ಅಲಂಕರಿಸಲು ತುದಿಗಾಲಿನಲ್ಲಿ ನಿಂತು ಕನಸು ಕಂಡಿದ್ದು ನುಚ್ಚು ನೂರಾಯಿತು.