ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಪಕ್ಷದ ಅಭ್ಯರ್ಥಿಗಳು ಪರಾಭವಗೊಂಡಿರುವ 100 ಕ್ಷೇತ್ರಗಳಲ್ಲಿ ಹಮ್ಮಿಕೊಂಡಿರುವ ಪ್ರಚಾರಾಂದೋಲನ ಪ್ರವಾಸಕ್ಕೆ ಮಾರ್ಚ್ 3ರಿಂದ ಚಾಲನೆ ನೀಡಲು ನಿರ್ಧರಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಇಂದು ತಮ್ಮ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಹಿರಿಯ ನಾಯಕರ ಸಭೆ ಬಳಿಕ ಮಾತನಾಡಿದ ಅವರು, ಮಾರ್ಚ್ 3ರಿಂದ 5ರವರೆಗೆ ಮೊದಲ ಹಂತದ ಪ್ರವಾಸ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಚಿಕ್ಕಬಳ್ಳಾಪುರ, ದೇವನಹಳ್ಳಿ ಹಾಗೂ ನೆಲಮಂಗಲದಲ್ಲಿ ಪ್ರಚಾರ ನಡೆಸಲು ನಿರ್ಧರಿಸಲಾಗಿದ್ದು, ಪ್ರತಿ ಕ್ಷೇತ್ರದಲ್ಲಿ ಪಾದಯಾತ್ರೆ ನಡೆಯಲಿದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಮ್ಮ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಿದೆ. ಮಾರ್ಚ್ 1ರಂದು ದರ್ಗಾ ಮತ್ತು ದೇವಾಲಯಗಳಿಗೆ ಭೇಟಿ ನೀಡಿ ಪಾದಯಾತ್ರೆಗೆ ಚಾಲನೆ ನೀಡಲಾಗುವುದು. ಮಾ.4ರಂದು ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಪಡೆ ಪಾದಯಾತ್ರೆ ನಡೆಸಲಿದೆ. ಮಾ.5ರಂದು ದೇವನಹಳ್ಳಿ, ಮಾ.6ರಂದು ನಾಗಮಂಗಲದಲ್ಲಿ ಪಾದಯಾತ್ರೆ ನಡೆಯಲಿದೆ. ಹಾಗೆ ಸೋತ ಕ್ಷೇತ್ರಗಳಲ್ಲಿ 2ಕಿಮೀ ಪಾದಯಾತ್ರೆ ಮಾಡಿ ಸಮಾವೇಶ ನಡೆಸಲಾಗುವುದು ಎಂದು ಶಿವಕುಮಾರ್ ವಿವರಿಸಿದರು.
ಇದು ಒಂದು ದೀರ್ಘಕಾಲೀನ ಅಭಿಯಾನವಾಗಿದ್ದು,ಪಕ್ಷ ಬಲಪಡಿಸಲು ಮತ್ತು ಹೆಚ್ಚಿನ ಜನಬೆಂಬಲ ಗ್ರಹಿಸಲು ವರ್ಷಪೂರ್ತಿ ಪಾದಯಾತ್ರೆಗಳು ಮತ್ತು ಸಾರ್ವಜನಿಕ ರ‍್ಯಾಲಿಗಳು ನಡೆಯಲಿವೆ. ಮತ್ತೊಂದು ಅಲ್ಪಾವಧಿಯಲ್ಲಿ ಸಂಘಟನಾತ್ಮಕ ಬಲವರ್ಧನೆಗಾಗಿ ನಿರ್ದಿಷ್ಟ ಪ್ರತಿಭಟನೆ ಸೇರಿ ಹಲವು ಅಂಶಗಳು ಇದರಲ್ಲಿ ಸೇರಿಕೊಂಡಿವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗರೆಡ್ಡಿ ವಿವರಿಸಿದರು.
ಯಾರ್ಯಾರಿಗೆ ಯಾವ ಜವಾಬ್ದಾರಿ
ಉತ್ತಮ ಸಮನ್ವಯಕ್ಕಾಗಿ ರಾಜ್ಯ ಕಾಂಗ್ರೆಸ್ ಘಟಕದ 5 ಕಾರ್ಯಾಧ್ಯಕ್ಷರಿಗೆ ಜಿಲ್ಲೆಗಳು ಮತ್ತು ಸಹಾಯಕ ಘಟನೆಗಳ ಉಸ್ತುವಾರಿ ನೀಡಲಾಗಿದೆ. ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ , ಚಿಕ್ಕಬಳ್ಳಾಪುರ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಕೇಂದ್ರ ರಾಜ್ಯ ಮಹಿಳಾ ಘಟಕ, ಆಸ್ತಿ ಮತ್ತು ಸ್ವತ್ತುಗಳ ಸಮಿತಿ ಹೊಣೆಯನ್ನು ರಾಮಲಿಂಗಾರೆಡ್ಡಿ ಅವರಿಗೆ ವಹಿಸಲಾಗಿದೆ.
ಗದಗ, ಹಾವೇರಿ, ದಾವಣಗೆರೆ, ದಕ್ಷಿಣ ಕನ್ನಡ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ಸೇವಾದಳ ಮತ್ತು ಪಕ್ಷದ ಸಂಘಟನೆ ಹಾಗೂ ಆಡಳಿತ ಜವಾಬ್ದಾರಿಯನ್ನು ಕೆಪಿಸಿಸಿ ಮತ್ತೊಬ್ಬ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಅವರಿಗೆ ನೀಡಲಾಗಿದೆ.
ಕಲಬುರಗಿ, ಯಾದಗಿರಿ, ರಾಯಚೂರು, ಬೀದರ್, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳು ಹಾಗೂ ಕಿಸಾನ್ ಕಾಂಗ್ರೆಸ್ ಜವಾಬ್ದಾರಿಯನ್ನು ಈಶ್ವರ್ ಖಂಡ್ರೆ ಅವರಿಗೆ ವಹಿಸಲಾಗಿದೆ.
ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ ಹುಬ್ಬಳ್ಳಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಉಸ್ತುವಾರಿಯನ್ನು ಸತೀಶ್ ಜಾರಕಿಹೊಳಿ ಅವರಿಗೆ ವಹಿಸಿಕೊಡಲಾಗಿದೆ.
ಜೊತೆಗೆ ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳ ಉಸ್ತುವಾರಿಯನ್ನು ಧ್ರುವನಾರಾಯಣ್ ಅವರಿಗೆ ವಹಿಸಲಾಗಿದೆ.