ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ತೈಲ ದರ ಇಳಿಕೆ, ಇ- ವೇ ಬಿಲ್ ನಿಯಮಾವಳಿ ರದ್ದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಲಾರಿ ಮತ್ತು ಟ್ರಕ್ ಸೇರಿದಂತೆ ಸರಕು- ಸಾಗಣೆ ವಾಹನಗಳ ಮಾಲೀಕರು ದೇಶವ್ಯಾಪಿ ಮುಷ್ಕರ ಬೆಂಬಲಿಸಿ ನಗರದಲ್ಲೂ ಶುಕ್ರವಾರ ಲಾರಿಗಳು ಕಾರ್ಯಾಚರಣೆ ಸ್ಥಗಿತಗೊಳಿಸಿದ್ದವು.
ಬೆಂಗಳೂರು – ತುಮಕೂರು ಹೆದ್ದಾರಿ, ಮಾದನಾಯಕನಹಳ್ಳಿ ನೈಸ್ ರಸ್ತೆ ಜಂಕ್ಷನ್ ನಲ್ಲಿ ಲಾರಿ ಮಾಲೀಕರು ಹಾಗೂ ಏಜೆಂಟರ ಸಂಘಗಳ ಒಕ್ಕೂಟದ ವತಿಯಿಂದ ಲಾರಿಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಲಾಯಿತು. ಇದರಿಂದ ಕಿಲೋಮೀಟರುಗಟ್ಟಲೆ ವಾಹನಗಳು ನಿಲ್ಲಬೇಕಾಯಿತು. ಪ್ರತಿಭಟನೆಯಿಂದ ವಾಹನದಟ್ಟಣೆ ಹೆಚ್ಚಾಗಿ ಸವಾರರು ಪರದಾಡುವಂತಾಯಿತು.
ಅಗತ್ಯ ವಸ್ತುಗಳನ್ನು ಪೂರೈಸುವ ವಾಹನಗಳನ್ನು ಹೊರತುಪಡಿಸಿ ಉಳಿದೆಲ್ಲ ವಾಹನಗಳು ರಸ್ತೆಗೆ ಇಳಿಯಲಿಲ್ಲ. ರಾಜ್ಯಾದ್ಯಂತ ಸುಮಾರು 6 ಲಕ್ಷ ಲಾರಿಗಳು ಸ್ತಬ್ಧವಾಗಿದ್ದವು. bs.six ವಾಹನಗಳ ಬಿಡಿಭಾಗ ದರ ಹೆಚ್ಚಳ ಹಾಗೂ ತೆರಿಗೆ ಹೆಚ್ಚಳದಿಂದ ಸರಕು ಸಾಗಾಣಿಕೆ ಉದ್ಯಮಕ್ಕೆ ಬಹಳ ತೊಂದರೆಯಾಗಿದೆ. ಬೇರೆ ರಾಜ್ಯಗಳಲ್ಲಿ ಡೀಸೆಲ್ ದರ ಪ್ರತಿ ಲೀಟರ್ ಗೆ 3 ಕಡಿಮೆ ಮಾಡಲಾಗಿದೆ. ಅದರಂತೆ ನಮ್ಮ ರಾಜ್ಯದಲ್ಲೂ ಕಡಿಮೆ ಮಾಡಬೇಕು ಎಂದು ರಾಜ್ಯ ಲಾರಿ ಮಾಲೀಕರು ಹಾಗೂ ಏಜೆಂಟರ ಸಂಘದ ಒಕ್ಕೂಟದ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ ಆಗ್ರಹಿಸಿದರು.
ಈ ನಡುವೆ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಎಲ್ಲಾ ಲಾರಿ ಮಾಲೀಕರು ಹೆದ್ದಾರಿ ತಡೆಗೂ ಮುಂದಾಗಿದ್ದರು. ಆದರೆ ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ. ಇದರಿಂದ ಮಾಲೀಕರು ಹಾಗೂ ಪೊಲೀಸರ ನಡುವೆ ವಾಗ್ವಾದ ಕೂಡ ನಡೆಯಿತು.
ಇ- ವೇ ಬಿಲ್ ನ ಪ್ರಮಾಣವನ್ನು ಕಡಿಮೆ ಮಾಡಬೇಕು. ರಾಜ್ಯದಲ್ಲಿ ಕೂಡಲೇ ಡೀಸೆಲ್ ದರ ಕಡಿಮೆ ಮಾಡಬೇಕು ನೈಸ್ ರಸ್ತೆಯಲ್ಲಿ ಹಲವು ಟೋಲ್ ಗಳಿದ್ದು ಕೂಡಲೇ ಪಾಸ್ಟ್ಯಾಗ್ ಅಳವಡಿಸಬೇಕು. ಮರಳು ನೀತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಗುಜರಿ ನೀತಿಯಿಂದ ಮಾಲೀಕರು ಬೀದಿಗೆ
ಕೇಂದ್ರ ಸರ್ಕಾರದ ಗುಜರಿ ನೀತಿ ಜಾರಿಗೆ ತಮ್ಮ ವಿರೋಧವಿದೆ. ವಾಹನ ಉತ್ಪಾದಕ ಕಂಪನಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಈ ನೀತಿ ರೂಪಿಸಲಾಗಿದೆ. ಹೊಸ ನೀತಿಯಿಂದ ಲಾರಿ ಮಾಲೀಕರು ಬೀದಿಗೆ ಬರಲಿದ್ದಾರೆ. ಒಂದು ವೇಳೆ ಅದನ್ನು ಜಾರಿಮಾಡಲೇ ಬೇಕು ಎಂದಾದರೆ ಹಳೆಯ ವಾಹನಗಳಿಗೆ ಸೂಕ್ತ ಬೆಲೆ ನೀಡಬೇಕು ಹಾಗೂ ಹೊಸ ವಾಹನಗಳ ಖರೀದಿ ಪೂರಕ ಕೊಡುಗೆಗಳನ್ನು ನೀಡಬೇಕೆಂದು ಆಗ್ರಹಿಸಿದರು.