ವಿಜಯಪಥ ಸಮಗ್ರ ಸುದ್ದಿ
ಬಾಗಲಕೋಟೆ: ಬಾದಾಮಿಯ ಐತಿಹಾಸಿಕ ಕ್ಷೇತ್ರದ ಅಗಸ್ತ್ಯತೀರ್ಥ ಹೊಂಡದ ಮೇಲಿರುವ 96 ಮನೆಗಳ ಸ್ಥಳಾಂತರಕ್ಕೆ 6.16 ಕೋಟಿ ರೂ.ಗಳ ಯೋಜನಾ ವರದಿಗೆ ಭಾರತೀಯ ಪುರಾತತ್ವ ಇಲಾಖೆಯು ಒಪ್ಪಿಗೆ ನೀಡಿದ್ದು, ಪುರರ್ವಸತಿ ಕಾರ್ಯ ಶಿಘ್ರದಲ್ಲಿ ನಡೆಯಲಿದೆ ಎಂದು ಯೋಜನೆಯ ನೋಡಲ್ ಅಧಿಕಾರಿಯೂ ಆಗಿರುವ ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ಯಶವಂತ ಗುರುಕಾರ ಹೇಳಿದರು.
ನವನಗರದ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಹೊಂಡದ ಮೇಲೆ 96 ಮನೆಗಳು ಇರುವುದರಿಂದ ಯಾವುದೇ ರೀತಿಯ ಅಭಿವೃದ್ದಿ ಕಾರ್ಯಕೈಗೊಳ್ಳಲು ಸಾದ್ಯವಾಗುತ್ತಿರಲಿಲ್ಲ. ಕಳೆದ 40 ವರ್ಷಗಳಿಂದ ಮನೆಗಳ ಸ್ಥಳಾಂತರ ಕಾರ್ಯ ಕೈಗೊಂಡರೂ ಸಹ ಸಾಧ್ಯವಾಗಿರಲಿಲ್ಲ ಎಂದು ತಿಳಿಸಿದರು.
ಭಾರತೀಯ ಪುರಾತತ್ವ ಇಲಾಖೆಯು 2003 ರಲ್ಲಿ ಸ್ಥಳಾಂತರಕ್ಕೆ ಎರಡು ಮುಕ್ಕಾಲು ಕೋಟಿ ರೂ.ಗಳ ಡಿಪಾಜಿಟ್ ಮಾಡಿ ಹಲವಾರು ಪ್ರಯತ್ನಗಳು ನಡೆಸಿದರು. ಹೆಚ್ಚಿನ ಪರಿಹಾರಕ್ಕಾಗಿ ಯುಕೆಪಿ ಮಾದರಿಯಲ್ಲಿ ಪರಿಹಾರ ನೀಡುವಂತೆ ಒತ್ತಾಯಸಿದ ಹಿನ್ನೆಲೆಯಲ್ಲಿ ಅಡಚಣೆಯಾಗಿತ್ತು.
ನಂತರ 36 ಕೋಟಿ ರೂ.ಗಳಿಗೆ ಯೋಜನೆ ರೂಪಿಸಲಾಯಿತ್ತು. ಆದರೆ ಕಳೆದ 6 ತಿಂಗಳಿನಿಂದ ಜಿಲ್ಲಾಧಿಕಾರಿಗಳು ಈ ಯೋಜನೆಗೆ ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಿದಾಗ ಇದರ ಬಗ್ಗೆ ಅಧ್ಯಯನ ಮಾಡಿದಾಗ ಹೊಂಡದ ಮೇಲಿರುವ ಜಾಗ ಸರಕಾರಕ್ಕೆ ಸೇರಿರುವ ಬಗ್ಗೆ ತಿಳಿದು ಬಂದಿತು ಎಂದರು.
ಪುನಃ 96 ಮನೆಗಳ ಸ್ಥಳಾಂತರಕ್ಕೆ 6.16 ಕೋಟಿ ರೂ.ಗಳ ಕ್ರಿಯಾ ಯೋಜನೆ ರೂಪಿಸಿ ಅನುಮತಿಗಾಗಿ ಕಳುಹಿಸಲಾಗಿದ್ದು, ಈ ಯೋಜನೆಗೆ ಭಾರತೀಯ ಪುರಾತತ್ವ ಇಲಾಖೆಯು ಒಪ್ಪಿಗೆ ಸೂಚಿಸಿದೆ. ಮನೆಗಳ ಸ್ಥಳಾಂತರಕ್ಕೆ ಬಾದಾಮಿಯ ಚಾಲುಕ್ಯ ನಗರದಲ್ಲಿರುವ 3 ಎಕರೆ ಜಮೀನನ್ನು ಎಕರೆಗೆ 50 ಲಕ್ಷದಂತೆ ಒಟ್ಟು 1.50 ಕೋಟಿ ರೂ.ಗಳಲ್ಲಿ ಖರೀದಿಸಲಾಗುತ್ತಿದ್ದು, ಈ ಜಮೀನಿನಲ್ಲಿ ಲೇಔಟ್ ಮಾಡಿ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಹಾಗೂ ಅಂಗನವಾಡಿ, ಶಾಲೆ ಸೇರಿದಂತೆ ಎಲ್ಲ ಮೂಲಭೂತ ಸೌಲಭ್ಯ ಕಲ್ಪಿಸಿ ಮಾದರಿಯಾಗುವ ನಿಟ್ಟಿನಲ್ಲಿ ರೂಪಿಸಲಾಗುತ್ತಿದೆ ಎಂದರು.
ಈಗಾಗಲೇ ಅಗಸ್ತ್ಯತೀರ್ಥದ ಮೇಲಿರುವ 96 ಮನೆಗಳಿಗೆ ಅಭಿವೃದ್ದಿ ಪಡಿಸಲಾಗುತ್ತಿರುವ ಲೇಔಟ್‍ನಲ್ಲಿ 30*30 ಅಳತೆಯ ಪ್ಲಾಟ್‍ಗಳನ್ನು ನೀಡಲಾಗುತ್ತಿದೆ. ಮನೆಗಳಿಗೆ ಎರಡು ಪಟ್ಟು ಪರಿಹಾರ ನೀಡಲಾಗುತ್ತಿದೆ.
ಮನೆಗಳ ಮೌಲ್ಯಮಾಪನ ಮಾಡಿಲಾಗಿದ್ದು, ಕಡಿಮೆ ಎಂದರೆ 3.50 ಲಕ್ಷ ರೂ.ಗಳಿಂದ ಹಿಡಿದು ಗರಿಷ್ಠ 22 ಲಕ್ಷ ರೂ.ಗಳ ವರೆಗೆ ಪರಿಹಾರ ಪಡೆಯಲಿದ್ದಾರೆ. ಕಳೆದ 1964 ರಿಂದ ಮಾಹತಿ ತೆಗೆಯಲಾಗಿ ಆ ಜಾಗ ಸರಕಾರಿ ಜಾಗವಾಗಿರುವದರಿಂದ 15 ದಿನಗಳಲ್ಲಿ ಮನೆಗಳು ಸ್ಥಳಾಂತರಗೊಳ್ಳಲಿದ್ದು, ಪುರರ್ವಸತಿ ಕಾರ್ಯ ಶೀಘ್ರದಲ್ಲಿಯೇ ಕಾರ್ಯಗತಗೊಳ್ಳಲಿದೆ ಎಂದು ತಿಳಿಸಿದರು.
ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಬಾದಾಮಿ ಸೇರ್ಪಡೆ!
ಜಿಲ್ಲೆಯಲ್ಲಿ ಪಟ್ಟದಕಲ್ಲು ಮಾತ್ರ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದು, ಬಾದಾಮಿಯನ್ನು ಸಹ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಅಭಿವೃದ್ದಿ ಕಾಮಗಾರಿ ಕೈಗೊಳ್ಳುತ್ತಿದೆ. ಅದಕ್ಕಾಗಿ ಮನೆಗಳ ಸ್ಥಳಾಂತರ ಕಾರ್ಯಗೊಂಡಲ್ಲಿ ಅಭಿವೃದ್ದಿಗೆ ಅನುಕೂಲವಾಗಲಿದೆ.
ರಾಜ್ಯ ಸರಕಾರ ಬಾದಾಮಿ ಐತಿಹಾಸಿಕ ಅಭಿವೃದ್ದಿಗೆ 25 ಕೋಟಿ ರೂ.ಗಳ ಅನುದಾನ ನೀಡಿದೆ. ಅಗಸ್ತ್ಯತೀರ್ಥ ಹೊಂಡದ ಸುತ್ತಮುತ್ತ ಪಾರ್ಕಿಂಗ್ ವ್ಯವಸ್ಥೆಗೆ 9.50 ಎಕರೆ ಜಾಗವನ್ನು ಎಪಿಎಂಸಿಯಿಂದ ಪಡೆಯಲಾಗುತ್ತಿದೆ. ಹೆಚ್ಚುವರಿಯಾಗಿ 2 ಎಕರೆ ತೆಗೆದುಕೊಂಡು ಸಂಪೂರ್ಣವಾಗಿ ಅಭಿವೃದ್ದಿ ಪಡಿಸುವ ಮೂಲಕ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸುವದರಿಂದ ಅಭಿವೃದ್ದಿಗೆ ಇನ್ನು ಹೆಚ್ಚಿನ ಅನುದಾನ ಬರಲಿದೆ ಎಂದು ಯಶವಂತ ತಿಳಿಸಿದರು.