ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ರಾತ್ರಿ 10 ರಿಂದ ಬೆಳಗ್ಗೆ 6 ರವರೆಗೆ ಮಸೀದಿಗಳು ಮತ್ತು ದರ್ಗಾಗಳಲ್ಲಿ ಧ್ವನಿ ವರ್ಧಕಗಳ ಬಳಕೆಯನ್ನು ನಿಷೇಧಿಸಿ ರಾಜ್ಯ ವಕ್ಫ್ ಮಂಡಳಿ ಸುತ್ತೋಲೆ ಹೊರಡಿಸಿದೆ.
ಈ ಕುರಿತು ಚರ್ಚಿಸಲು ರಾಜ್ಯ ವಕ್ಫ್ ಮಂಡಳಿ ಡಿಸೆಂಬರ್ 19 ರಂದು ಸಭೆ ಸೇರಿತು. ಎಲ್ಲಾ ಮಸೀದಿಗಳು ಮತ್ತು ದರ್ಗಾ ನಿರ್ವಹಣಾ ಸಮಿತಿಗಳಿಗೆ ಶಬ್ದ ಮಾಲಿನ್ಯ ನಿಯಂತ್ರಣದ ಬಗ್ಗೆ ಅರಿವು ಮೂಡಿಸಲಾಯಿತು. ಈ ಹಿನ್ನೆಲೆಯಲ್ಲಿ ಪ್ರಮುಖ ಸುತ್ತೋಲೆ ಹೊರಡಿಸಿರುವ ರಾಜ್ಯ ವಕ್ಫ್ ಮಂಡಳಿ, ರಾತ್ರಿ 10 ರಿಂದ ಬೆಳಗ್ಗೆ 6 ರವರೆಗೆ ಮಸೀದಿ ಮತ್ತು ದರ್ಗಾದಲ್ಲಿ ಧ್ವನಿ ವರ್ಧಕಗಳನ್ನು ಬಳಸದಂತೆ ಸಲಹೆ ನೀಡಿದೆ.
ಅಝಾನ್ಗೆ ಯಾವುದೇ ನಿರ್ಬಂಧಗಳಿಲ್ಲ ಆದರೆ, ವಕ್ಫ್ ಮಂಡಳಿಯಡಿಯಲ್ಲಿ ನೋಂದಾಯಿಸಲಾಗಿರುವ ಸುಮಾರು 32 ಸಾವಿರ ಕ್ಕೂ ಹೆಚ್ಚು ಮಸೀದಿಗಳು ಮತ್ತು ದರ್ಗಾಗಳಲ್ಲಿ ಧ್ವನಿ ವರ್ಧಕಗಳ ಬಳಕೆಯನ್ನು ರಾತ್ರಿ 10 ರಿಂದ ಬೆಳಗ್ಗೆ 6 ರವರೆಗೆ ಬಳಸದಂತೆ ಸೂಚಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ವಕ್ಫ್ ಬೋರ್ಡ್ ಸದಸ್ಯ ಮತ್ತು ಕರ್ನಾಟಕ ಮುಸ್ಲಿಂ ಜಮಾತ್ನ ರಾಜ್ಯ ಪ್ರಧಾನ ಕಾರ್ಯದರ್ಶಿ ಮೌಲಾನ ಶಾಫಿ ಸಾದಿ, ‘ಅಝಾನ್ ಬಗ್ಗೆ ರಾಜ್ಯ ವಕ್ಫ್ ಮಂಡಳಿ ಯಾವುದೇ ನಿರ್ಬಂಧ ಹೇರಿಲ್ಲ. ಸುತ್ತೋಲೆಯ ಕ್ರಮ ಸಂಖ್ಯೆ ಮೂರರಲ್ಲಿ ಸ್ಪಷ್ಟವಾಗಿ ಅಝಾನ್ ಮತ್ತು ಇತರ ಯಾವ ವಿಚಾರಗಳಿಗೆ ಧ್ವನಿವರ್ಧಕ ಬಳಸಬಹುದೆಂದು ಸ್ಪಷ್ಟಪಡಿಸಲಾಗಿದೆ.
10-07-2017 ರಂದು ಆಗಿನ ವಕ್ಫ್ ಮಂಡಳಿಯ ಆಡಳಿತಾಧಿಕಾರಿಯವರು ಹೊರಡಿಸಿದ ಸುತ್ತೋಲೆಯ ಯಥಾ ಪ್ರತಿಯನ್ನೇ 19-12-2020 ರಂದು ಹೊರಡಿಸಲಾಗಿದೆ. ನಿರ್ಣಯದಲ್ಲಿ ಯಾವುದೇ ಲೋಪದೋಷಗಳಿದ್ದರೂ ಮುಂದಿನ ಸಭೆಯಲ್ಲಿ ಚರ್ಚಿಸಿ ಸರಿಪಡಿಸಲಾಗುವುದು ಎಂದು ಹೇಳಿದ್ದಾರೆ.
ಸುತ್ತೋಲೆಯ ಪ್ರಮುಖ ಸೂಚನೆಗಳು
- ರಾತ್ರಿ 10 ರಿಂದ ಸಂಜೆ 6 ರವರೆಗೆ ಮಸೀದಿ ಮತ್ತು ದರ್ಗಾಗಳಲ್ಲಿ ಧ್ವನಿವರ್ಧಕಗಳನ್ನು ಬಳಸಬಾರದು.
- ಧ್ವನಿವರ್ಧಕವನ್ನು ಅಜನ್ ಮತ್ತು ಸಾವು, ಸಮಾಧಿ ಸಮಯ ಮತ್ತು ಚಂದ್ರನಂತಹ ಪ್ರಮುಖ ಪ್ರಕಟಣೆಗಳಿಗೆ ಮಾತ್ರ ಬಳಸಬೇಕು.
- ಹಗಲಿನಲ್ಲಿ ಬಳಸುವ ಧ್ವನಿವರ್ಧಕಗಳು ಶಬ್ದಕ್ಕಾಗಿ ಸುತ್ತುವರಿದ ಗಾಳಿಯ ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿರಬೇಕು.
- ಯಾವುದೇ ಸಂದರ್ಭದಲ್ಲಿ, ಶಬ್ದಗಳನ್ನು ಹೊರಸೂಸುವ ಪಟಾಕಿಗಳನ್ನು ಮಸೀದಿ ಮತ್ತು ದರ್ಗಾದ ಆವರಣದಲ್ಲಿ ಸುಡಬಾರದು.
- ಮಸೀದಿ ಅಥವಾ ದರ್ಗಾ ಆವರಣದೊಳಗಿನ ಮೈಕ್ಗಳನ್ನು ಲಾತ್, ಜುಮಾ ಖುತ್ಬಾ, ಬಯಾನ್ಸ್ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳಿಗೆ ಬಳಸಬೇಕು.