ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ಷೇಪಾರ್ಹ ಟೀಕೆಗಳನ್ನು ಮಾಡಿರುವ ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ವಿರುದ್ಧ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಚ್.ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಎಸ್.ಆರ್.ವಿಶ್ವನಾಥ್ ಅವರು, ನಮ್ಮ ಪಕ್ಷದಲ್ಲಿದ್ದುಕೊಂಡು ಪಕ್ಷ ಮತ್ತು ಸರ್ಕಾರದ ವಿರುದ್ಧ ಹೇಳಿಕೆ ನೀಡುವುದನ್ನು ಬಿಡಿ. ಇಲ್ಲವಾದರೆ, ಪಕ್ಷದಿಂದ ಹೊರಹೋಗಿ ಎಂದು ತಾಕೀತು ಮಾಡಿದ್ದಾರೆ.
ಬೇರೆ ಪಕ್ಷಕ್ಕೆ ರಾಜೀನಾಮೆ ನೀಡಿ ಬಂದ ನಿಮಗೆ ಚುನಾವಣೆಗೆ ಸ್ಪರ್ಧಿಸುವುದು ಬೇಡ ಎಂದು ಪಕ್ಷ ಹೇಳಿದ್ದರೂ ಹಠಕ್ಕೆ ಬಿದ್ದು ಸ್ಪರ್ಧಿಸಿ ಹೀನಾಯವಾಗಿ ಸೋತಿರಿ. ಸೋಲನುಭವಿಸಿದ ನಿಮಗೆ ಮೇಲ್ಮನೆಗೆ ನಾಮನಿರ್ದೇಶನ ಮಾಡುವ ಅಗತ್ಯವಿರಲಿಲ್ಲ. ಆದರೆ, ಕರೆತಂದು ಟಿಕೆಟ್ ಕೊಟ್ಟು ನಿಮಗೆ ಗೌರವ ಕೊಟ್ಟು ಎಂಎಲ್ ಸಿ ಮಾಡಿದ ಯಡಿಯೂರಪ್ಪ ಮತ್ತು ಸರ್ಕಾರದ ವಿರುದ್ಧವೇ ಮಾತನಾಡುವ ಮೂಲಕ ಪಕ್ಷದ್ರೋಹ ಮಾಡುತ್ತಿದ್ದೀರಿ. ನಿಮ್ಮ ಅಗತ್ಯ ನಮ್ಮ ಪಕ್ಷಕ್ಕಿಲ್ಲ ಎಂದು ಕಿಡಿಕಾರಿದ್ದಾರೆ.
ಈ ಹಿಂದೆ ಸಚಿವರಾಗಿದ್ದರು ಎಂಬ ಕಾರಣಕ್ಕೆ ನಿಮ್ಮ ಹಿರಿತನಕ್ಕೆ ಗೌರವ ಕೊಟ್ಟಿರುವ ಸ್ಥಾನಮಾನವನ್ನು ಅನುಭವಿಸುತ್ತಾ ಉಂಡ ಮನೆಗೇ ದ್ರೋಹ ಬಗೆಯುವ ರೀತಿಯಲ್ಲಿ ವರ್ತಿಸುತ್ತಿರುವುದು ಖಂಡನೀಯವಾಗಿದೆ. ನೀವು ಒಂದು ರೀತಿಯಲ್ಲಿ ಕೊರೊನಾವೈರಸ್ ಗಿಂತಲೂ ಅಪಾಯಕಾರಿ ಎಂದು ವಾಗ್ದಾಳಿ ನಡೆಸಿದ್ದಾರೆ.
ನೀವು ಚುನಾವಣೆ ರಾಜಕೀಯದಲ್ಲಿ ಸವಕಲು ನಾಣ್ಯವಾಗಿದ್ದೀರಿ. ಮುಖ್ಯಮಂತ್ರಿ ಮತ್ತು ಬಿಜೆಪಿ ಮುಖಂಡರು ಇಲ್ಲದೇ ಇದ್ದಿದ್ದರೆ ನೀವು ರಾಜಕೀಯ ಸನ್ಯಾಸತ್ವ ಪಡೆಯುತ್ತಿದ್ದೀರಿ ಎಂಬುದನ್ನು ನೆನಪು ಮಾಡಿಕೊಳ್ಳಿ. ಚುನಾವಣೆಯಲ್ಲಿ ಸೋತ ನಿಮಗೆ ವಿಧಾನಪರಿಷತ್ ಸ್ಥಾನ ಸಿಕ್ಕಿರುವುದೇ ದೊಡ್ಡದು. ಆದರೆ, ಮಂತ್ರಿ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ನೀವು ಪಕ್ಷದ ವಿರುದ್ಧವೇ ಮನಸಿಗೆ ಬಂದಂತೆ ಟೀಕೆ ಮಾಡುತ್ತಿರುವುದನ್ನು ಗಮನಿಸಿದರೆ ನಿಮ್ಮ ಮನಸ್ಥಿತಿ ಯಾವ ಹಂತದಲ್ಲಿದೆ ಎಂಬುದು ರಾಜ್ಯದ ಜನತೆಗೆ ತಿಳಿಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರಕ್ಕೆ ಮಾರ್ಗದರ್ಶನ, ಸಲಹೆ ನೀಡಲು ನಿಮ್ಮ ಹಿರಿತನವನ್ನು ಬಳಸಿ. ಅದನ್ನು ಬಿಟ್ಟು ನಾನೇ ಮೇಧಾವಿ ಎಂದು ಫೋಸ್ ಕೊಡುವ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಾ ಬರುತ್ತಿರುವ ನಿಮ್ಮ ಧೋರಣೆಯನ್ನು ಗಮನಿಸಿದರೆ ನೀವೊಬ್ಬ ಪ್ರಚಾರ ಪ್ರಿಯ ಮತ್ತು ಪೇಪರ್ ಟೈಗರ್ ಎಂಬುದು ಸಾಬೀತಾಗುತ್ತಿದೆ. ಇದೇ ರೀತಿ ಹೇಳಿಕೆ ನೀಡುತ್ತಾ ಹೋದರೆ ನಿಮ್ಮ ಅಸ್ತಿತ್ವ ಮತ್ತಷ್ಟು ಅವನತಿಗೆ ತಳ್ಳಲ್ಪಡುತ್ತದೆ ಎಂಬುದನ್ನು ಮೊದಲು ಅರಿಯಿರಿ ಎಂದು ಕಿಡಿ ಕಾರಿದ್ದಾರೆ.