ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ದಿನದಿಂದ ದಿನಕ್ಕೆ ಕೊರೊನಾ ಮಹಾಮಾರಿ ರಾಜ್ಯವನ್ನು ಹೆಚ್ಚು ಹೆಚ್ಚಾಗಿ ಬಾಧಿಸುತ್ತಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್ ಮಾಡುವ ಕುರಿತು ಇಂದು ಸಿಎಂ ಯಡಿಯೂರಪ್ಪ ಹಿರಿಯ ಸಚಿವರು ಮತ್ತು ಅಧಿಕಾರಿಗಳ ಸಭೆ ನಡೆಸುತ್ತಿದ್ದಾರೆ.
ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಈ ಸಂಬಂಧ ಸಭೆ ನಡೆಯುತ್ತಿದ್ದು, ಸಚಿವರಾದ ಆರ್.ಅಶೋಕ್, ಡಿಸಿಎಂ ಅಶ್ವತ್ಥನಾರಾಯಣ, ಅಧಿಕಾರಿಗಳಾದ ಮಂಜುನಾಥ್ ಪ್ರಸಾದ್, ಕಮಲ್‌ಪಂಥ್ ಸೇರಿ ಇತರರು ಭಾಗಿಯಾಗಿದ್ದಾರೆ.
ರಾಜ್ಯದಲ್ಲಿ ಪ್ರಸ್ತುತ ಇರುವ ಜನತಾ ಕರ್ಫ್ಯೂನಿಂದ ಏನು ಪ್ರಯೋಜವಾಗುತ್ತಿಲ್ಲ. ಹೀಗಾಗಿ ನಾವು ಕಠಿಣ ನಿಲುವನ್ನು ತೆಗೆದುಕೊಳ್ಳುವುದು ಅನಿರ್ವಾಯವಾಗಿದೆ ಎಂದು ಯಡಿಯೂರಪ್ಪ ಸುದ್ದಿಗಾರರಿಗೆ ತಿಳಿಸಿದ ಬೆನ್ನಲ್ಲೇ ಸಭೆ ಆರಂಭವಾಗಿದೆ. ಈ ಸಭೆಯಲ್ಲಿ ಇಂದಿನಿಂದಲೇ ಇಲ್ಲ ನಾಳೆಯಿಂದಲೇ ಲಾಕ್‌ಡೌನ್ ಜಾರಿ ಮಾಡುವ ಸಂಬಂಧ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಕಳೆದ ಏಪ್ರಿಲ್ 28ರಿಂದ ಜನತಾ ಕರ್ಫ್ಯೂ ಜಾರಿಯಾಗಿದ್ದು, ಇಂದಿಗೆ 10 ದಿನ ಕಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಜನರ ಓಡಾಟ ಸಾಮಾನ್ಯವಾಗಿದೆ. ಜತೆಗೆ ಕೊರೊನಾ ಸೋಂಕಿತರ ಸಂಖ್ಯೆಯೂ ಗಣನೀಯವಾಗಿ ಏರುತ್ತಲೇ ಇದೆ. ಇದು ಹೀಗೆ ಮುಂದುವರಿದರೆ ನಾಡಿನಲ್ಲಿ ಇನ್ನು ಹೆಚ್ಚಿನ ಅನಾಹುತ ಮಾಡಲಿದೆ. ಹೀಗಾಗಿ ಲಾಕ್‌ಡೌನ್ ಅನಿವಾರ್ಯ ಎಂದು ಆಡಳಿತ ಪಕ್ಷದ ಶಾಸಕರು, ಸಂಸದರೇ ಹೇಳಿಕೆ ನೀಡುತ್ತಿದ್ದಾರೆ.
ಈ ಎಲ್ಲವನ್ನು ಗಮನಿಸಿರುವ ಸಿಎಂ ಯಡಿಯೂರಪ್ಪ ಲಾಕ್‌ಡೌನ್ ಮಾಡುವ ಮುನ್ಸೂಚನೆ ನೀಡಿದ್ದು, ಅಧಿಕಾರಿಗಳು ಸಚಿವರನ್ನು ಕರೆದು ಚರ್ಚೆ ನಡೆಸುತ್ತಿದ್ದಾರೆ. ಈ ಸಭೆಯಲ್ಲಿ ಲಾಕ್‌ಡೌನ್ ಮಾಡಿದರೆ ಸಾಮಾನ್ಯರ ಜೀವನದ ಗತಿ ಏನು? ಅವರಿಗೆ ಆಹಾರ ಒದಗಿಸುವುದು ಹೇಗೆ? ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಕೊಡಿಸುವುದು ಹೇಗೆ? ಇತ್ಯಾದಿಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.