ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ದಿನದಿಂದ ದಿನಕ್ಕೆ ಕೊರೊನಾ ಮಹಾಮಾರಿ ರಾಜ್ಯವನ್ನು ಹೆಚ್ಚು ಹೆಚ್ಚಾಗಿ ಬಾಧಿಸುತ್ತಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್ ಮಾಡುವ ಕುರಿತು ಇಂದು ಸಿಎಂ ಯಡಿಯೂರಪ್ಪ ಹಿರಿಯ ಸಚಿವರು ಮತ್ತು ಅಧಿಕಾರಿಗಳ ಸಭೆ ನಡೆಸಿದ್ದು, ಈ ಸಭೆಯಲ್ಲಿ ಮೇ 10ರಿಂದ 24ರವರೆಗೂ ಲಾಕ್‌ಡೌನ್ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಈ ಸಂಬಂಧ ನಡೆದ ಸಭೆಯಲ್ಲಿ ಸಚಿವರಾದ ಆರ್.ಅಶೋಕ್, ಡಿಸಿಎಂ ಅಶ್ವತ್ಥನಾರಾಯಣ, ಅಧಿಕಾರಿಗಳಾದ ಮಂಜುನಾಥ್ ಪ್ರಸಾದ್, ಕಮಲ್‌ಪಂಥ್ ಸೇರಿ ಇತರರು ಭಾಗಿಯಾಗಿದ್ದರು.
ಈ ವೇಳೆ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಲಾಕ್‌ಡೌನ್ ಅನಿರ್ವಾಯ ಎಂದು ಸಿಎಂ ಗಮನಕ್ಕೆ ಸಚಿವರು ಮತ್ತು ಅಧಿಕಾರಿಗಳು ತಂದ ಹಿನ್ನೆಲೆಯಲ್ಲಿ ಲಾಕ್‌ಡೌನ್ ಮಾಡುವ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಅಧಿಕೃತ ಮೂಲಗಳು ಖಚಿತಪಡಿಸಿವೆ.
ಇಂದು ಮಧ್ಯಾಹ್ನ 1ಗಂಟೆಗೆ ಸಿಎಂ ಯಡಿಯೂರಪ್ಪ ಲಾಕ್ಡೌನ್ ಮಾಡುವ ಸಂಬಂಧ ಸುದ್ದಿಗೋಷ್ಠಿಕರೆದಿದ್ದು, ಅಲ್ಲಿ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯ ಸಂಪೂರ್ಣ ಲಾಕ್‌ಡೌನ್ ಆಗುವುದರಿಂದ ಅಗತ್ಯ ವಸ್ತುಗಳಾದ ದಿನಸಿ, ಹಾಲು, ಹಣ್ಣು ಸೇರಿ ಪ್ರಮುಖವಾದವುಗಳಿಗೆ ಕಾಲಮಿತಿಯಲ್ಲಿ ಅವಕಾಶವಿದ್ದು ಉಳಿದ ಎಲ್ಲವೂ ಬಂದ್ ಆಗಲಿವೆ.