ವಿಜಯಪಥ ಸಮಗ್ರ ಸುದ್ದಿ
ನ್ಯೂಡೆಲ್ಲಿ: ಕರ್ನಾಟಕ ಕೇಳಿರುವಷ್ಟು ಆಕ್ಸಿಜನ್ ಪೂರೈಕೆ ಮಾಡುವುದು ಕಷ್ಟ ಎಂದು ಕೇಂದ್ರ ಸರ್ಕಾರ ಹೇಳಿ, ರಾಜ್ಯ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ಕೇಂದ್ರ ಸರ್ಕಾರದ ವಿರುದ್ಧ ಸುಪ್ರಿಂ ಕೋರ್ಟ್ ಗರಂ ಆಗಿದ್ದು, ಕರ್ನಾಟಕ ಕೇಳಿದಷ್ಟು ಆಕ್ಸಿಜನ್ ಪೂರೈಸಲು ಆದೇಶಿಸಿದೆ.
ಈ ಮೂಲಕ ಕರ್ನಾಟಕ ರಾಜ್ಯಕ್ಕೆ 1200 ಮೆಟ್ರಿಕ್ ಟನ್ ಆಮ್ಲಜನಕ ಪೂರೈಕೆ ಮಾಡುವಂತೆ ರಾಜ್ಯ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
ಇದರಿಂದ ಕೇಂದ್ರ ಸರ್ಕಾರಕ್ಕೆ ಭಾರಿ ಮುಖಭಂಗವಾಗಿದ್ದು, ಕೇಂದ್ರದ ನಡೆಗೆ ಹಿನ್ನಡೆಯೂ ಆಗಿದೆ. ಕರ್ನಾಟಕ ಹೈಕೋರ್ಟ್ ನೀಡಿರುವ ಆದೇಶಕ್ಕೆ ತಡೆ ನೀಡುವುದಿಲ್ಲ ಎಂದಿರುವ ಸುಪ್ರೀಂ ಕೋರ್ಟ್, ಹೈಕೋರ್ಟ್ ನೀಡಿರುವ ಆದೇಶಕ್ಕೆ ತಾನು ಮಧ್ಯ ಪ್ರವೇಶಿಸುವುದಿಲ್ಲ. ಅದು ನೀಡಿರುವ ಆದೇಶ ತಪ್ಪಲ್ಲ ಎಂದಿದೆ. ಜೊತೆಗೆ ನಾಲ್ಕು ದಿನಗಳಲ್ಲಿ ರಾಜ್ಯದ ಮನವಿ ಪರಿಗಣಿಸಲು ಕೇಂದ್ರಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.
ಕರ್ನಾಟಕದ ಜನರನ್ನು ಕಷ್ಟಕ್ಕೆ ದೂಡಲು ಸಾಧ್ಯವಿಲ್ಲ. ಮನವಿ ಪರಿಗಣಿಸುವವರೆಗೆ ತಕ್ಷಣ ಜಾರಿಗೆ ಬರುವಂತೆ ದಿನಕ್ಕೆ 1200 ಮೆಟ್ರಿಕ್ ಟನ್‌ಗೆ ಆಮ್ಲಜನಕ ಪೂರೈಕೆ ಹೆಚ್ಚಿಸಿ ನೀಡುವಂತೆ ನ್ಯಾಯಮೂರ್ತಿಗಳು ಸೂಚನೆ ನೀಡಿದ್ದಾರೆ.
ಕೊರೊನಾ ವಿಶ್ವಮಾರಿ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದ್ದರೂ ರಾಜ್ಯವನ್ನು ಕಡೆಗಣಿಸಿದ್ದ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿರುವ ಕೋರ್ಟ್ ಆದೇಶ ನಿಜಕ್ಕೂ ಜನಪರ ಕಾಳಜಿಯಿಂದ ಕೂಡಿದೆ. ಇದರಿಂದ ರಾಜ್ಯಕ್ಕೆ ಟಾನಿಕ್ ಸಿಕ್ಕಂತ್ತಾಗಿದೆ. ಇನ್ನು ಇಂಥ ನೀಚ ನಡೆಯನ್ನು ಕೇಂದ್ರ ಸರ್ಕಾರ ಬಿಟ್ಟು ಎಲ್ಲ ರಾಜ್ಯದವರನ್ನೂ ಭಾರತೀಯರೇ ಎಂದು ನೋಡುವ ಮನೋಭಾವನೆ ಬೆಳೆಸಿಕೊಳ್ಳಬೇಕಿದೆ ಎಂದು ಪ್ರಜ್ಞಾವಂತ ರಾಜ್ಯದ ಮಂದಿ ಸಲಹೆ ನೀಡಿದ್ದಾರೆ.
ಇನ್ನು ತಮ್ಮದೇ ಪಕ್ಷದ ನೇತೃತ್ವದ ಸರ್ಕಾರ ರಾಜ್ಯದಲ್ಲಿದ್ದರೂ ಕೇಂದ್ರ ಸರ್ಕಾರ ರಾಜ್ಯಕ್ಕೆ ತಾರತಮ್ಯ ಧೋರಣೆ ಅನುಸರಿಸಿದ್ದು, ಎಷ್ಟು ಸರಿ ಎಂಬ ಬಗ್ಗೆ ಈಗ ಭಾರಿ ಚರ್ಚೆಯೂ ಆಗುತ್ತಿದೆ.