ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯನ್ನು ಕಡಿಮೆ ಮಾಡುವ ಸಲುವಾಗಿ ಹೊಸ ಪ್ಲಾನ್ ಮಾಡಿಕೊಂಡಿರುವ ರಾಜ್ಯ ಸರ್ಕಾರ ಕೋವಿಡ್ ಪರೀಕ್ಷೆಯ ಸಂಖ್ಯೆಯನ್ನೇ ಕಡಿಮೆ ಮಾಡಿರುವುದು ಕಂಡು ಬಂದಿದೆ.
ಕಳೆದ ಮೂರು ವಾರಗಳಿಂದ ಪರೀಕ್ಷೆಗಳ ಸಂಖ್ಯೆಯನ್ನು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಡಿಮೆ ಮಾಡಿದೆ ಎಂದು ಹೇಳಲಾಗುತ್ತಿದೆ. ಆರೋಗ್ಯ ಇಲಾಖೆ ನೀಡಿರುವ ಅಂಕಿಅಂಶಗಳ ಪ್ರಕಾರ, ಮೇ 8ರಂದು 1.46 ಲಕ್ಷ ಇದ್ದ ಪರೀಕ್ಷೆ ಸಂಖ್ಯೆ ಮಂಗಳವಾರ ವೇಳೆಗೆ 1.04 ಲಕ್ಷಕ್ಕೆ ಇಳಿಕೆಯಾಗಿದೆ.
ಇಲಾಖೆ ಅಧಿಕಾರಿಗಳು ಮತ್ತು ಸರ್ಕಾರ ತೆಗೆದುಕೊಂಡಿರುವ ಈ ಕ್ರಮದಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಈ ನಡುವಲ್ಲೇ ಕೋವಿಡ್ ತಾಂತ್ರಿಕ ಸಮಿತಿಯ ಸದಸ್ಯರು ಸಾಕಷ್ಟು ಸಲಹೆಗಳನ್ನು ನೀಡುತ್ತಿದ್ದರೂ ಅವುಗಳನ್ನು ಗಾಳಿಗೆ ತೂರುತ್ತಿರುವ ಬೆಳವಣಿಗೆ ರಾಜ್ಯ ಸರ್ಕಾರದಲ್ಲಿ ಕಂಡು ಬರುತ್ತಿದೆ.
ಇದು ಉತ್ತಮ ಬೆಳವಣಿಗೆಯಲ್ಲ. ಕಳೆದ ಎರಡು ದಿನಗಳಿಂದ ಪರೀಕ್ಷೆಗಳ ಸಂಖ್ಯೆಯನ್ನೇ ಇಳಿಸಲಾಗಿದೆ. ಆದರೆ, ಸಕ್ರಿಯ ಪ್ರಕರಣಗಳ ಪ್ರಮಾಣ ಹೆಚ್ಚಳಗೊಂಡಿದೆ. ಈ ಬೆಳವಣಿಗೆಯೂ ಸೋಂಕು ವ್ಯಾಪಕವಾಗಿ ಹರಡುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಕೋವಿಡ್ ಪರೀಕ್ಷೆಯ ನೋಡಲ್ ಅಧಿಕಾರಿ ಮತ್ತು ಕೋವಿಡ್ ತಾಂತ್ರಿಕ ಸಮಿತಿಯ ಮುಖ್ಯಸ್ಥ ಡಾ.ಸಿ.ಎನ್. ಮಂಜುನಾಥ್ ಹೇಳಿದ್ದಾರೆ.