ವಿಜಯಪಥ ಸಮಗ್ರ ಸುದ್ದಿ
ಚಿಕ್ಕೋಡಿ(ಬೆಳಗಾವಿ): ರಾಜ್ಯದಲ್ಲಿ ಕೊರೊನಾ ವೈರಸ್ ತಾಂಡವವಾಡುತ್ತಿದ್ದು, ಪ್ರತಿ ದಿನ ಅನೇಕ ಮಂದಿ ಸಾವನ್ನಪ್ಪುತ್ತಿದ್ದಾರೆ. ಇದೀಗ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರ ಅಣ್ಣನ ಮಗ ಕೂಡ ಮಾಹಾಮಾರಿಗೆ ಬಲಿಯಾಗಿದ್ದಾರೆ.
ವಿನೋದ ಪರಪ್ಪ ಸವದಿ(36) ಕೊರೊನಾಗೆ ಬಲಿಯಾದವರು. ಕಳೆದ ವಾರದಿಂದ ಅಥಣಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿನೋದ ಇಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಲಕ್ಷ್ಮಣ ಸವದಿ ಅವರ ಸಹೋದರ, ಕೃಷ್ಣ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಪರಪ್ಪ ಸವದಿ ಅವರ ಪುತ್ರ ವಿನೋದ್ ಸವದಿ ಬುಧವಾರ ಬೆಳಗ್ಗೆ ಅಸುನೀಗಿದ್ದಾರೆ.
ಈ ಬಗ್ಗೆ ಸಚಿವ ಲಕ್ಷ್ಮಣ ಸವದಿ ಟ್ವೀಟ್ ಮಾಡಿದ್ದು ಕೃಷ್ಣಾ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಪರಪ್ಪ ಸವದಿ ಅವರ ಜೇಷ್ಠ ಪುತ್ರ ವಿನೋದ ಸವದಿ ಅವರು ಇಂದು ನಮ್ಮನ್ನು ಅಗಲಿದ್ದಾರೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.