ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಸಾರಿಗೆ ನೌಕರರು ಕಳೆದ ಏ.7ರಿಂದ 21ರವರೆಗೆ 15ದಿನಗಳು ನಡೆಸಿದ ಮುಷ್ಕರದ ವೇಳೆ ವರ್ಗಾವಣೆ ಮಾಡಲಾಗಿದ್ದ ನೌಕರರ ವರ್ಗಾವಣೆ ಆದೇಶವನ್ನು ಮೂರು ಸಾರಿಗೆ ನಿಗಮಗಳು ರದ್ದುಪಡಿಸಿವೆ.
ಆರನೇ ವೇತನ ಆಯೋಗ ಜಾರಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ತಿಂಗಳು ನಡೆದ ಮುಷ್ಕರದ ವೇಳೆ ವರ್ಗಾವಣೆ ಮಾಡಲಾಗಿದ್ದ ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ, ಎನ್‌ಇಕೆಆರ್‌ಟಿಸಿ ನೌಕರರ ವರ್ಗಾವಣೆ ಆದೇಶ ರದ್ದುಪಡಿಸಿರುವ ಬಗ್ಗೆ ಇಂದು ಉಚ್ಚ ನ್ಯಾಯಾಲಯಕ್ಕೆ ಹಾಜರಾಗಿದ್ದ ಸಾರಿಗೆ ಸಂಸ್ಥೆಗಳ ಪರ ವಕೀಲರು ಮಾಹಿತಿ ನೀಡಿದ್ದಾರೆ ಎಂದು ನೌಕರರ ಪರ ವಕಾಲತು ವಹಿಸಿರುವ ವಕೀಲ ಎಚ್.ಬಿ.ಶಿವರಾಜು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇನ್ನು ಬಿಎಂಟಿಸಿಯಲ್ಲಿ ಅಮಾನತುಮಾಡಿ ನಂತರ ಅಮಾನತು ಅದೇಶವನ್ನು ಕಾಯ್ದಿರಿಸಿ ನೌಕರರ ವರ್ಗಾವಣೆ ಮಾಡಿರುವ ಆದೇಶದ ಬಗ್ಗೆ ಮೇ 26ರಂದು ನಡೆಯುವ ವಿಚಾರಣೆ ವೇಳೆ ವಿಚಾರ ಮಂಡನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಈಗಾಗಲೇ ಬಿಎಂಟಿಸಿಯಿಂದ ವರ್ಗಾವಣೆಯಾಗಿರುವ ಎಲ್ಲ ನೌಕರರು ವರ್ಗಾವಣೆಗೊಂಡಿರುವ ಘಟಕಗಳಲ್ಲಿ ಡ್ಯೂಟಿ ರಿರ್ಪೋಟ್ ಮಾಡಿಕೊಂಡಿದ್ದಾರೆ. ಆದರೂ ಸಾಮೂಹಿಕವಾಗಿ ವರ್ಗಾವಣೆ ಮಾಡಿರುವುದನ್ನು ರದ್ದುಪಡಿಸಿ ಈ ಹಿಂದಿನಂತೆಯೇ ಆಯಾಯ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡಿ ಎಂದು ನೌಕರರು ಕೇಳಿಕೊಂಡಿರುವ ಬಗ್ಗೆ ಮೇ 26ರಂದು ನ್ಯಾಯಾಲಯದಲ್ಲಿ ವಿಚಾರ ಮಂಡಿಸುವುದಾಗಿ ತಿಳಿಸಿದ್ದಾರೆ.
ಇನ್ನು ಪ್ರಮುಖವಾಗಿ ವಜಾಗೊಂಡ ನೌಕರರು ಯಾವುದೇ ಖಿನ್ನತೆಗೆ ಒಳಗಾಗದೆ ಧೈರ್ಯದಿಂದಿರಿ, ಮುಂದಿನ ದಿನಗಳಲ್ಲಿ ನಿಮ್ಮ ನ್ಯಾಯಯುತ ಬೇಡಿಕೆ ಈಡೇರಲಿದೆ ಎಂದು ತಿಳಿಸಿದ್ದಾರೆ.
ಇನ್ನು 6ನೇ ವೇತನ ಆಯೋಗ ಜಾರಿ ಬಗ್ಗೆ ಮುಂದಿನ ದಿನಗಳಲ್ಲಿ ನ್ಯಾಯಾಲಯದಲ್ಲಿ ಸೂಕ್ತ ನ್ಯಾಯಸಿಗುವ ಭರವಸೆ ಇದೆ. ಹೀಗಾಗಿ ನೌಕರರು ಒಗ್ಗಟ್ಟಿನಿಂದ ಇರಿ ಎಂದು ಶಿವರಾಜು ಸಲಹೆ ನೀಡಿದ್ದಾರೆ.
ಇನ್ನು ವಿವಿಧ ವಿಭಾಗಗಳಿಗೆ ವರ್ಗಾವಣೆ ಮಾಡಿದ್ದ ನೌಕರರ ಆದೇಶ ರದ್ದುಪಡಿಸಿರುವ ವಿಚಾರವಾಗಿ ನಮ್ಮ ಕೈಗೆ ಅದೇಶಪ್ರತಿ ಇನ್ನು ಸಿಕ್ಕಿಲ್ಲ ಎಂದು ತಿಳಿಸಿದ್ದು, ಆದರೂ ನೀವು ನಿಮ್ಮ ಘಟಕಗಳಿಗೆ ತೆರಳಿ ಡ್ಯೂಟಿ ರಿರ್ಪೋಟ್ ಮಾಡಿಕೊಳ್ಳಿ ಎಂದು ತಿಳಿಸಿದರು.