ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಜೂನ್ 21 ರಿಂದ ಪ್ರಾರಂಭವಾಗಬೇಕಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಅನಿರ್ದಿಷ್ಟಾವಧಿ ಕಾಲ ಮುಂದೂಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರಕಟಿಸಿದ್ದಾರೆ.
ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳು, ವಿದ್ಯಾರ್ಥಿ-ಪೋಷಕರ, ವಿವಿಧ ಶಾಲಾ ಸಂಘಟನೆಗಳ ಆತಂಕಗಳನ್ನು ಗಮನದಲ್ಲಿರಿಸಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಕೊರೊನಾ ಎರಡನೇ ಅಲೆಯ ಪ್ರಸರಣ ಸಂಪೂರ್ಣ ತಹಬಂದಿಗೆ ಬಂದ ಸಂದರ್ಭದಲ್ಲಿ, ಮುಂಚಿತವಾಗಿಯೇ ಮುಂದಿನ ಪರೀಕ್ಷೆ ದಿನಾಂಕಗಳನ್ನು ಪ್ರಕಟಿಸಲಾಗುತ್ತದೆ ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳು ವಿಚಲಿತರಾಗದೇ ಏಕಾಗ್ರತೆಯಿಂದ ಪರೀಕ್ಷೆಯ ಸಿದ್ಧತೆಯಲ್ಲಿ ತೊಡಗಿಸಿಕೊಳ್ಳಬೇಕು, ಪರೀಕ್ಷೆ ಕುರಿತಂತೆ ಯಾವುದೇ ಕಾರಣಕ್ಕೂ ಆತಂಕಕ್ಕೊಳಗುವ ಅವಶ್ಯಕತೆ ಇಲ್ಲ ಎಂದು ಸಲಹೆ ನೀಡಿದ್ದಾರೆ.