ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು : ಹಿರಿಯ ಪತ್ರಕರ್ತ ಮಹದೇವ್ ಪ್ರಕಾಶ್ (65) ಇಂದು ಕೊರೊನಾ ಮಹಾಮಾರಿಯಿಂದ ನಿಧನರಾಗಿದ್ದಾರೆ.
ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ.
1975ರಲ್ಲಿ ಲೋಕವಾಣಿ ದಿನಪತ್ರಿಕೆ ಮೂಲಕ ಪತ್ರಿಕೋದ್ಯಮಕ್ಕೆ ಪದಾರ್ಪಣೆ ಮಾಡಿದ ಅವರು, ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಹೊರಳು ನೋಟ ಅಂಕಣ ಬರೆಯುತ್ತಿದ್ದರು. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿ ಸೇವೆ ಸಲ್ಲಿಸಿರುವ ಅವರು `ಈ ಬಾನುವಾರ’ ಪತ್ರಿಕೆಯ ಸಂಪಾದಕರಾಗಿದ್ದರು.
ಮಹದೇವ ಪ್ರಕಾಶ್ ಅವರ ನಿಧನಕ್ಕೆ ಸಿಎಂ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.
ಮಹದೇವ್ ಪ್ರಕಾಶ್ ನಿಧನಕ್ಕೆ ಎಎಪಿಯ ಪೃಥ್ವಿರೆಡ್ಡಿ ತೀವ್ರ ಸಂತಾಪ
ಮಹದೇವ್ ಪ್ರಕಾಶ್ ಅವರ ನಿಧನ ತೀವ್ರ ಆಘಾತಕಾರಿ ಹಾಗೂ ದುಃಖದ ಸಂಗತಿಯಾಗಿದೆ. ಅವರು ಕನ್ನಡದ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸಿ ರಾಜಕೀಯ ವಲಯದಲ್ಲಿಯೂ ಸಹ ಸಾಕಷ್ಟು ಹಿರಿಮೆ ಗರಿಮೆಯನ್ನು ಗಳಿಸಿಕೊಂಡಿದ್ದರು.
ವ್ಯವಸ್ಥೆಯ ಬದಲಾವಣೆಗಾಗಿ ಸಾಕಷ್ಟು ಮಿಡಿಯುತ್ತಿದ್ದರು. ಅವರ ಅಗಲಿಕೆ ಕನ್ನಡ ಪತ್ರಿಕೋದ್ಯಮಕ್ಕೆ ಹಾಗೂ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದ್ದು ಆಮ್ ಆದ್ಮಿ ಪಕ್ಷವು ಈ ಮೂಲಕ ತೀವ್ರ ಸಂತಾಪವನ್ನು ವ್ಯಕ್ತ ಪಡಿಸುತ್ತಿದೆ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ಅವರ ಕುಟುಂಬ ವರ್ಗಕ್ಕೆ ಹಾಗೂ ಅವರ ಅಪಾರ ಮಿತ್ರ ಬಂಧು ಬಳಗಕ್ಕೆ ನೀಡಲೆಂದು ಈ ಮೂಲಕ ಪ್ರಾರ್ಥಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.