ವಿಜಯಪಥ ಸಮಗ್ರ ಸುದ್ದಿ
ಮೈಸೂರು: ನಗರದಲ್ಲಿ ಕೆಲ ಖಾಸಗಿ ಕೋವಿಡ್ ಆರೈಕೆ ಕೇಂದ್ರಗಳು ಅವ್ಯವಸ್ಥೆಯಿಂದ ಕೂಡಿವೆ ಎಂಬ ಮಾತ್ರಕ್ಕೆ ಎಲ್ಲಾ ಖಾಸಗಿ ಕೋವಿಡ್ ಕೇಂದ್ರಗಳನ್ನು ಮುಚ್ಚುವ ಕ್ರಮ ಸರಿಯಲ್ಲ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬುಧವಾರ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರು ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಕೆಲ ಆಸ್ಪತ್ರೆಗಳ ಅವ್ಯವಸ್ಥೆ ಕಂಡು ಸಂಪೂರ್ಣ ಖಾಸಗಿ ಆಸ್ಪತ್ರೆಗಳ ಅನುಮತಿ ರದ್ದು ಮಾಡಿದ್ದಾರೆ. ಈ ಕ್ರಮ ಸರಿಯಾದುದಲ್ಲ ಎಂದು ನಗರದಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸರ್ಕಾರವೇ ಖಾಸಗಿಯವರಿಗೆ ಕೋವಿಡ್ ಆರೈಕೆ ಕೇಂದ್ರ ತೆರೆಯಿರಿ ಎನ್ನುತ್ತಿದೆ. ಆದರೆ, ಮೈಸೂರಿನಲ್ಲಿ ಕೇಂದ್ರಗಳನ್ನು ಮುಚ್ಚಿಸಲಾಗುತ್ತಿದೆ. ಅವ್ಯವಸ್ಥೆ ಇರುವ ಆಸ್ಪತ್ರೆಗಳನ್ನು ಬೇಕಾದರೆ ಮುಚ್ಚಲಿ. ಆದರೆ, ಎಲ್ಲಾ ಖಾಸಗಿ ಆಸ್ಪತ್ರೆಗಳನ್ನು ಮುಚ್ಚುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಇನ್ನು ಈ ಕುರಿತು ಆತುರದ ನಿರ್ಧಾರ ತೆಗೆದುಕೊಂಡಿರುವ ಶಾಸಕ ಎಸ್.ಎ.ರಾಮದಾಸ್ ಬೇಕಿದ್ದರೆ ಅವರ ಕೆ.ಆರ್.ಕ್ಷೇತ್ರದ ಖಾಸಗಿ ಆಸ್ಪತ್ರೆಗಳನ್ನು ಮುಚ್ಚಿಸಲಿ. ಆದರೆ, ಜಿಲ್ಲೆಯ ಎಲ್ಲಾ ಖಾಸಗಿ ಕೋವಿಡ್ ಕೇರ್ ಅನುಮತಿ ರದ್ದುಗೊಳಿಸಲು ಅವರಿಗೆ ಯಾವ ಅಧಿಕಾರ ಇದೆ? ರಾಮದಾಸ್ ಅವರು ಮುಂದೆ ಸಚಿವರಾಗಬಹುದು ಅಂದುಕೊಂಡಿದ್ದೆವು. ಈಗಲೇ ಸಚಿವರಾಗಿ ಬಿಟ್ಟಿದ್ದಾರಾ? ಎಂದು ಪ್ರಶ್ನಿಸಿದ ಅವರು, ನಗರದ 16 ಖಾಸಗಿ ಕೋವಿಡ್ ಆರೈಕೆ ಕೇಂದ್ರಗಳ ಅನುಮತಿ ರದ್ದುಗೊಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಮ್‌ದಾಸ್ ಅಧಿಕಾರ ವ್ಯಾಪ್ತಿ ಮೀರಿ ವರ್ತಿಸುತ್ತಿದ್ದಾರೆ. ಅವರು ತಮ್ಮನ್ನೇ ಉಸ್ತುವಾರಿ ಸಚಿವರು ಎಂದುಕೊಂಡಂತಿದೆ. ಜಿಲ್ಲೆಯಲ್ಲಿ ಏನು ನಡೆಯುತ್ತಿದೆ ಎಂದೇ ಗೊತ್ತಾಗುತ್ತಿಲ್ಲ. ಏಕಾಏಕಿ ಎಲ್ಲಾ ಖಾಸಗಿ ಕೋವಿಡ್ ಆರೈಕೆ ಕೇಂದ್ರಗಳನ್ನು ಮುಚ್ಚಲಾಗಿದೆ. ಅಲ್ಲಿನ ರೋಗಿಗಳು ಏನು ಮಾಡಬೇಕು. ಅವರಿಗೆ ಬೇರೆ ಏನು ವ್ಯವಸ್ಥೆ ಮಾಡಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.