ವಿಜಯಪಥ ಸಮಗ್ರ ಸುದ್ದಿ
ಮೈಸೂರು: ನಿನಗೆ ತಾಕತ್ತಿದ್ದರೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿಸು. ಸುಖಾಸುಮ್ಮನೆ ಹಾದಿಬೀದಿಲಿ ನಿಂತು ಮಾತನಾಡಬೇಡ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಪ್ರತಾಪ್ ಸಿಂಹಗೆ ಏಕ ವಚನದಲ್ಲಿಯೇ ಸವಾಲು ಹಾಕಿ, ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಸಂಸದ ಪ್ರತಾಪ್ ಸಿಂಹ ಹಲವು ದಿನಗಳಿಂದಲೂ ಮೈಸೂರು ಜಿಲ್ಲಾಧಿಕಾರಿ ವಿರುದ್ಧ ಹೇಳಿಕೆ ನೀಡುತ್ತಲೇ ಇದ್ದಾರೆ. ಇದರಿಂದ ಒಂದುರೀತಿ ಸಿಟ್ಟಿಗೆದ್ದಿರುವ ಮಾಜಿ ಸಚಿವ ಜಿಟಿಡಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಸಿಂಹ ವಿರುದ್ಧ ಕಿಡಿಕಾರಿದರು.
ದಿನ ಬೆಳಗಾದರೆ ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಪತ್ರಿಕೆಗೆ ಸ್ಟೇಟ್‌ಮೆಂಟ್ ಕೊಟ್ಟರೆ ನೀನು ಹುಲಿ ಆಗಲ್ಲ. ಅಧಿಕಾರಿಗಳ ನಡುವೆ ಒಡಕು ಮೂಡಿಸುವ ಕೆಲಸ ಮಾಡಬೇಡ. ವೈಫಲ್ಯತೆ ಬಗ್ಗೆ ವಿರೋಧ ಪಕ್ಷದವರು ಮಾತನಾಡಬೇಕು, ಆಡಳಿತ ಪಕ್ಷದವರಲ್ಲ. ನೀನು ಪವರ್‌ಫುಲ್ ಸಂಸದ. ನೀನು ಹೇಳಿದಂತೆ ಪಿಎಂ ಮತ್ತು ಸಿಎಂ ಕೇಳ್ತಾರೆ. ತಾಕತ್ತಿದ್ದರೆ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿ ತೋರಿಸು ಎಂದು ಸವಾಲು ಹಾಕಿದರು.
ಜಿಲ್ಲೆಯ ಶಾಸಕರು ನಿನಗಿಂತ ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಸ್ವಂತ ಹಣದಲ್ಲಿ ಕೋವಿಡ್ ನಿಯಂತ್ರಣಕ್ಕೆ ಮುಂದಾಗಿದ್ದಾರೆ. ಸಂಸದನಾಗಿ ನೀನೆಷ್ಟು ಸ್ವಂತ ಹಣ ಖರ್ಚು ಮಾಡಿದ್ದೀಯಾ ಹೇಳು? ತಾಕತ್ತಿದ್ದರೆ ಡಿಸಿಯನ್ನು ವರ್ಗಾವಣೆ ಮಾಡಿ ತೋರಿಸು. ಅದನ್ನು ಬಿಟ್ಟು ಪೇಪರ್ ಸ್ಟೇಟ್‌ಮೆಂಟ್ ಕೊಟ್ಟು ಗೊಂದಲ ಏಕೆ ಮೂಡಿಸ್ತೀಯಾ? ಇದರಿಂದ ಅಧಿಕಾರಿಗಳಲ್ಲಿ ಒಗ್ಗಟ್ಟು ಉಳಿಯುವುದಿಲ್ಲ. ಹೀಗಾದರೆ ಕೊರೊನಾ ಓಂಕು ನಿಯಂತ್ರಿಸುವುದು ಜಿಲ್ಲೆಯಲ್ಲಿ ಕಷ್ಟವಾಗುತ್ತಿದೆ ಎಂದು ತರಾಟೆಗೆತ್ತಿಕೊಂಡರು.
ನಿಮ್ಮ ಹೇಳಿಕೆಯ ಹಿಂದೆ ವೈಯಕ್ತಿಕ ಸಮಸ್ಯೆ ಇರುವಂತೆ ಕಾಣುತ್ತಿದೆ. ಈ ನಿಮ್ಮ ಹೇಳಿಕೆಗಳು ಜನರಲ್ಲಿ ಅನುಮಾನ ಸೃಷ್ಟಿಸಿವೆ. ಒಬ್ಬ ಮಾತ್ರ ಹೀರೋ, ನಾವೆಲ್ಲಾ ಝೀರೋನಾ? ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಜನರನ್ನು ಕಾಡುತ್ತಿದೆ. ಇದರಿಂದ ಹಲವರು ಜೀವ ಕಳೆದುಕೊಂಡಿದ್ದಾರೆ. ಹೀಗಾಗಿ ನೀನು ಇಂಥ ವರ್ತನೆಯನ್ನು ಬದಲಾಯಿಸಿಕೊಂಡು ಅಧಿಕಾರಿಗಳನ್ನು ಎಚ್ಚರಿಸಿ ಸರಿಯಾದ ಕ್ರಮವನ್ನು ಅನುಸರಿಸುವಂತೆ ಸೂಚನೆ ನೀಡಬೇಕು ಎಂದು ಸಲಹೆಯನ್ನೂ ನೀಡಿದರು.
ಜನ ಸಾಯ್ತಿದ್ದಾರೆ. ಈಗ ಸರ್ಕಾರ ತೆಗೆಯಲು ಹೋಗಬೇಕಿತ್ತ?
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡಲು ಹೊರಟಿರುವುದು ಸರಿಯಲ್ಲ. ಜನರ ಕಷ್ಟ ನೋಡುವ ಬದಲು ದೆಹಲಿಗೆ ಹೋಗುವ ಅಗತ್ಯ ಏನಿತ್ತು?. ಯಡಿಯೂರಪ್ಪ ಚನ್ನಾಗಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಕೆಲಸ ಮಾಡಲು ಬಿಡಿ. ಸರ್ಕಾರ ಬೀಳಸಲು ಪ್ರಯತ್ನ ಮಾಡಿರೋದು ಸರಿಯಲ್ಲ ಎಂದರು.