ವಿಜಯಪಥ ಸಮಗ್ರ ಸುದ್ದಿ
ಮೈಸೂರು: ಮಂಡ್ಯ- ಮೈಸೂರು ಜಿಲ್ಲೆಗಳ ಅಧಿಕಾರ ಸತಿ-ಪತಿಗಳ ಕೈಗೆ ಸರ್ಕಾರ ಒಪ್ಪಿಸಿದ್ದು ಎರಡೂ ಜಿಲ್ಲೆಗಳ ಅಭಿವೃದ್ಧಿಗೆ ಶ್ರಮಿಸುವಂತೆ ಸೂಚನೆ ನೀಡಿದೆ.
ಹೌದು! ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಆರೋಪದಿಂದಾಗಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಆ ಜಾಗಕ್ಕೆ ಐಎಎಸ್ ಅಧಿಕಾರಿ ಡಾ. ಬಗಾದಿ ಗೌತಮ್ ಅವರನ್ನು ನಿಯೋಜಿಸಲಾಗಿದೆ.
ಈಗ ಮೈಸೂರಿನಲ್ಲಿ ಪತಿ ಹಾಗೂ ಮಂಡ್ಯದಲ್ಲಿ ಸತಿ ಜಿಲ್ಲಾಧಿಕಾರಿಯಾಗಿದ್ದಾರೆ. ಈ ಮೂಲಕ ಒಂದು ರೀತಿ ಜೋಡಿ ಜೊಡಿ ಜಿಲ್ಲೆಗಳ ಆಡಳಿತವನ್ನು ಜೋಡಿಗಳ ಕೈಗೆ ಸರ್ಕಾರ ಒಪ್ಪಿಸಿರುವುದು ಅಭಿವೃದ್ಧಿ ದೃಷ್ಟಿಯಿಂದಲೂ ಒಳೆ ಬೆಳವಣಿಗೆ ಎಂದೇ ಹೇಳಲಾಗುತ್ತಿದೆ.
ಮೈಸೂರು ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡಿರುವ ಡಾ.ಬಗಾದಿ ಗೌತಮ್ ಅವರ ಪತ್ನಿ ಅಶ್ವತಿ ಮಂಡ್ಯ ಜಿಲ್ಲಾಧಿಕಾರಿಯಾಗಿದ್ದಾರೆ. ಗೌತಮ್ ಆಂಧ್ರಪ್ರದೇಶದವರಾಗಿದ್ದು, ಅಶ್ವತಿ ಕೇರಳದವರಾಗಿದ್ದಾರೆ. ಇವರಿಬ್ಬರೂ ಒಂದೇ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಮದುವೆಯಾಗಿದ್ದಾರೆ.
2019ರಲ್ಲಿ ಗೌತಮ್ ದಾವಣಗೆರೆ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿದ್ದರು. ಈ ವೇಳೆ ಅಶ್ವತಿ ಅವರು ಅದೇ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದರು. ಇಬ್ಬರೂ ಪರಸ್ಪರ ಒಪ್ಪಿ ಮದುವೆಯಾದರು.