ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ರಸ್ತೆ ಸಾರಿಗೆಯ ಎಲ್ಲಾ ನಾಲ್ಕೂ ನಿಗಮಗಳ ಬಸ್ ಸಂಚಾರಕ್ಕೆ ಅಧಿಕಾರಿಗಳು ಅಣಿಯಾಗುತ್ತಿದ್ದಾರೆ.
ಜೂನ್ 14ರಿಂದ ರಾಜ್ಯದಲ್ಲಿ ಬಹುತೇಕ ಅನ್ಲಾಕ್ ಮಾಡುವುದು ಖಚಿತವಾಗಿದೆ. ಹೀಗಾಗಿ ಸಾರಿಗೆ ಅಧಿಕಾರಿಗಳು ತಮ್ಮ ತಮ್ಮ ಸಿಬ್ಬಂದಿಗೆ ಕರ್ತವ್ಯಕ್ಕೆ ಹಾಜರಾಗಲು ಈಗಾಗಲೇ ಸೂಚನೆ ನೀಡಿದ್ದಾರೆ. ಜತೆಗೆ ಕೆಲ ನಿಯಮಗಳನ್ನು ಹೇರಿದ್ದಾರೆ.
ಇದರ ನಡುವೆ ಇಂದು ನಾಲ್ಕೂ ನಿಗಮಗಳ ಎಂಡಿಗಳು ಮತ್ತು ಅಧಿಕಾರಿಗಳ ಜತೆ ಸಾರಿಗೆ ನೌಕರರ ಪರವಾಗಿ ಉಚ್ಚನ್ಯಾಯಾದಲ್ಲಿ ವಾದ ಮಂಡಿಸುತ್ತಿರುವ ವಕೀಲ ಎಚ್.ಬಿ.ಶಿವರಾಜ್ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಲು ಅಧಿಕಾರಿಗಳು ಆಹ್ವಾನಿಸಿದ್ದಾರೆ.
ಇಂದು ನಡೆಯುವ ಸಭೆಯಲ್ಲಿ ಅಧಿಕಾರಿಗಳು ಮತ್ತು ನೌಕರರ ಪರ ನಿಂತಿರುವ ವಕೀಲರ ನಡುವೆ ಸೌಹಾರ್ದಯುತ ಮಾತುಕತೆ ನಡೆದರೆ ಈಗ ವರ್ಗಾವಣೆಗೊಂಡಿರುವ ನೌಕರರು ಈ ಹಿಂದೆ ಮಾಡುತ್ತಿದ್ದ ಕಾರ್ಯಸ್ಥಳಗಳಲ್ಲೇ (ಡಿಪೋ) ಕರ್ತವ್ಯಕ್ಕೆ ಹಾಜರಾಗುವರು. ಒಂದುವೇಳೆ ಸಭೆ ವಿಫಲವಾದರೆ ವರ್ಗಾವಣೆಗೊಂಡಿರುವ ಸ್ಥಳಕ್ಕೆ ತೆರಳಿ ನೌಕರರು ಕರ್ತವ್ಯಕ್ಕೆ ಹಾಜರಾಗಬೇಕಾಗುತ್ತದೆ.
ನಂತರ ನೌಕರರ ಪರ ವಕೀಲರು ಉಚ್ಚನ್ಯಾಯಾಲಯದಲ್ಲಿ ಈ ಬಗ್ಗೆ ಈಗಾಗಲೇ ಸಲ್ಲಿಸಿರುವ ಅಪಿಲು ಅರ್ಜಿಯನ್ನು ಕೈಗೆತ್ತಿಕೊಂಡು ಅಧಿಕಾರಿಗಳ ನಡೆ ಬಗ್ಗೆ ಸ್ಪಷ್ಟನೆ ಕೊಡಲಿದ್ದಾರೆ. ಮುಂದೆ ನ್ಯಾಯಾಲಯ ಯಾವ ರೀತಿ ಮಾರ್ಗದಶನ ಇಲ್ಲ ಆದೇಶ ಹೊರಡಿಸುತ್ತದೆಯೋ ಆ ರೀತಿ ಅಧಿಕಾರಿಗಳು ಮತ್ತು ನೌಕರರು ನಡೆದುಕೊಳ್ಳಬೇಕಾಗುತ್ತದೆ.
ಇದೆಲ್ಲದರ ನಡುವೆ ಸಾರಿಗೆ ನೌಕರರು ಕೇಳುತ್ತಿರುವುದು ನ್ಯಾಯಯುತವಾಗಿದ್ದು, ಅವರ ಬೇಡಿಕೆಗಳನ್ನು ನ್ಯಾಯಾಲಯ ಕಾನೂನು ರೀತಿಯಲ್ಲೇ ಬಗೆ ಹರಿಸಲಿದೆ ಎಂಬ ವಿಶ್ವಾಸವನ್ನು ನೌಕರರ ಕೂಟದ ಪದಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ.