ವಿಜಯಪಥ ಸಮಗ್ರ ಸುದ್ದಿ
ಲಾಹೋರ್: ಇಂದು ಬೆಳಗ್ಗೆ ಪಾಕಿಸ್ತಾನದಲ್ಲಿ ರೈಲು ಹಳಿ ತಪ್ಪಿ ಎದುರುಗಡೆಯಿಂದ ಬರುತ್ತಿದ್ದ ಎಕ್ಸ್ಪ್ರೆಸ್ ಟ್ರೈನ್ಗೆ ಡಿಕ್ಕಿ ಹೊಡೆದ ಪರಿಣಾಮ 30ಕ್ಕೂ ಮಂದಿ ಮೃತಪಟ್ಟಿದ್ದು, ಸುಮಾರು 50 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಲಾಹೋರ್ ಕಡೆಗೆ ಹೊರಟಿದ್ದ ಸರ್ ಸಯ್ಯದ್ ಎಕ್ಸ್ಪ್ರೆಸ್ ಟ್ರೈನ್ (Sir Syed Express), ಮಿಲಾತ್ ಎಕ್ಸ್ಪ್ರೆಸ್ ಟ್ರೈನ್ ನಡುವೆ ಅಪಘಾತ ಸಂಭವಿಸಿದೆ. ಘೋಟ್ಕಿ (Ghotki) ಸಮೀಪ ರೇತಿ ಮತ್ತು ಧರ್ಕಿ ರೈಲ್ವೆ ನಿಲ್ದಾಣಗಳ ಮಧ್ಯೆ ಈ ಅವಘಡ ಸಂಭವಿಸಿದೆ. ಮಿಲಾತ್ ಎಕ್ಸ್ಪ್ರೆಸ್ (Millat Express) ಟ್ರೈನ್ ಕರಾಚಿಯಿಂದ ಸರಗೋಢಾ ಕಡೆಗೆ ತೆರಳುತ್ತಿತ್ತು.
ಮಿಲಾತ್ ಎಕ್ಸ್ಪ್ರೆಸ್ ಟ್ರೈನಿನ 13 ಬೋಗಿಗಳು ಹಳಿ ತಪ್ಪಿದ್ದು, 8 ಬೋಗಿಗಳು ನಜ್ಜುಗುಜ್ಜಾಗಿವೆ. ಅಪಘಾತಕ್ಕೆ ತುತ್ತಾದ ಟ್ರೈನ್ಗಳ ಅವಶೇಷಗಳಲ್ಲಿ ಹತ್ತಾರು ಮಂದಿ ಸಿಲುಕಿಕೊಂಡಿದ್ದಾರೆ. ರಕ್ಷಣಾ ಕಾರ್ಯ ಕಷ್ಟಸಾಧ್ಯವಾಗಿದೆ ಎಂದು ಸ್ಥಳಕ್ಕೆ ದೌಡಾಯಿಸಿದ ಉನ್ನತಾಧಿಕಾರಿಗಳು ಹೇಳಿದ್ದಾರೆ. ಪಾಕಿಸ್ತಾನ್ ರೇಂಜರ್ಸ್ ಸಿಂಧ್ಗೆ ಸೇರಿದ ಭದ್ರತಾ ಪಡೆಗಳು (Pakistan Rangers Sindh) ಸ್ಥಳಕ್ಕೆ ತೆರಳಿದ್ದು, ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ.
ಸಿಂಧ್ ಪ್ರಾಂತ್ಯದ ಘೋಟ್ಕಿ ಜಿಲ್ಲೆಯ ಧರ್ಕಿ ನಗರದಲ್ಲಿ ಈ ಪ್ರಮುಖ ದುರಂತ ನಡೆದಿದ್ದು, ಘೋಟ್ಕಿ, ಧರ್ಕಿ, ಒಬಾರೋ ಮತ್ತು ಮಿರ್ಪುರ್ ಮಥೆಲೋ ಆಸ್ಪತ್ರೆಗಳಲ್ಲಿ ಎಮೆರ್ಜೆನ್ಸಿ ಘೋಷಣೆ ಮಾಡಲಾಗಿದೆ.
ಈ ಅಪಘಾತದಲ್ಲಿ 30ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಘೋಟ್ಕಿಯ ಜಿಲ್ಲಾಧಿಕಾರಿ ಉಸ್ಮಾನ್ ಅಬ್ದುಲ್ಲಾ ತಿಳಿಸಿದ್ದಾರೆ.
ಉರುಳಿ ಬಿದ್ದ ಬೋಗಿಗಳಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. 13 ರಿಂದ 14 ಬೋಗಿಗಳು ಹಳಿತಪ್ಪಿದ್ದು, ಅವುಗಳಲ್ಲಿ 6-8 ಬೋಗಿಗಳು ಸಂಪೂರ್ಣ ನಾಶವಾಗಿವೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.