ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಕಡಿಮೆಯಾಗುತ್ತಿರುವುದರಿಂದ ಒಂದು ತಿಂಗಳಿಗೂ ಹೆಚ್ಚು ಕಾಲ ಕರ್ನಾಟಕದಲ್ಲಿ ಜಾರಿಯಲಿದ್ದ ಲಾಕ್ಡೌನ್, ಜೂನ್ 14ರವರೆಗೂ ಮುಂದುವರಿಯಲಿದೆ. ಆದರೆ, ಇಂದಿನಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಹಂತ ಹಂತವಾಗಿ ಅನ್ಲಾಕ್ ಪ್ರಕ್ರಿಯೆ ಶುರುವಾಗಿದೆ.
ಒಂದೇ ಸಮಯದಲ್ಲಿ ಎಲ್ಲ ಲಾಕ್ಡೌನ್ ನಿಯಮಗಳನ್ನೂ ಸಡಿಲಗೊಳಿಸಿದರೆ ಮತ್ತೆ ಕೊರೊನಾ ಕೇಸುಗಳು ತಾರಕಕ್ಕೇರುವ ಅಪಾಯ ಇರುವುದರಿಂದ ಹಂತ ಹಂತವಾಗಿ ಅನ್ಲಾಕ್ ಮಾಡಲು ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸೋಮವಾರ (ಜೂ.7 )ದಿಂದ ಸಬ್ ರಿಜಿಸ್ಟ್ರಾರ್ ಕಚೇರಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಇದೇ ರೀತಿ ಹಂತ ಹಂತವಾಗಿ ಅನ್ಲಾಕ್ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.
ರಾಜ್ಯದಲ್ಲಿ ಲಾಕ್ ಡೌನ್ ಸಡಿಲಿಕೆ ವಿಚಾರವಾಗಿ ಇಂದು ಸಂಜೆಯೊಳಗೆ ನಿರ್ಧಾರವಾಗಲಿದೆ. ಕೊರೊನಾ ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆಯಿರುವ ಜಿಲ್ಲೆಗಳಲ್ಲಿ ಅನ್ಲಾಕ್ ಪ್ರಕ್ರಿಯೆ ಆರಂಭಿಸುವ ಬಗ್ಗೆ ರಾಜ್ಯ ಸರ್ಕಾರ ಇಂದಿನ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಇಂದಿನಿಂದ ರಾಜ್ಯಾದ್ಯಂತ ಬಸ್ ಸಂಚಾರವನ್ನು ಆರಂಭಿಸಲಾಗಿದ್ದುಕೈಗಾರಿಕೆಗಳಿಗೆ ಲಾಕ್ಡೌನ್ ನಿಯಮದಿಂದ ವಿನಾಯಿತಿ ನೀಡಲಾಗಿದೆ ಈ ಮೂಲಕ ಒಂದು ತಿಂಗಳಿನಿಂದ ಸ್ಥಗಿತಗೊಂಡಿದ್ದ ಆರ್ಥಿಕ ಚಟುವಟಿಕೆಗಳು ಕರ್ನಾಟಕದಲ್ಲಿ ಮತ್ತೆ ಚುರುಕು ಪಡೆದಿವೆ. ಜತೆಗೆ ಕೋವಿಡ್ ನಿಯಮಾನುಸಾರ ಕಾರ್ಯ ಚಟುವಟಿಕೆ ಮಾಡಬೇಕೆಂದು ಸರ್ಕಾರ ಆದೇಶ ನೀಡಿದೆ.
ಕೈಗಾರಿಕೆಗಳಿಗೆ ವಿನಾಯಿತಿ ನೀಡಿರುವುದರಿಂದ ದೂರದೂರುಗಳಿಂದ ಕಾರ್ಮಿಕರು ಬೆಂಗಳೂರಿಗೆ ಬರುತ್ತಿದ್ದಾರೆ. ಕ್ಯಾಬ್, ಆಟೋ, ಬೈಕ್ ಸೇರಿದಂತೆ ಸ್ವಂತ ವಾಹನಗಳಲ್ಲಿ ನಗರಕ್ಕೆ ಆಗಮಿಸಿದ್ದಾರೆ. ಇದರಿಂದ ಇಂದು ಬೆಳಗ್ಗೆ ನೆಲಮಂಗಲ ನವಯುಗ ಟೋಲ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ತುಮಕೂರು, ದಾವಣಗೆರೆ, ಶಿವಮೊಗ್ಗ, ಹಾಸನ, ಮಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಜನರು ಬೆಂಗಳೂರಿಗೆ ಬರತೊಡಗಿರುವುದರಿಂದ ತುಮಕೂರು ಬೆಂಗಳೂರು ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು.
ಶಿವಮೊಗ್ಗ, ಮೈಸೂರು, ವಿಜಯಪುರ ಸೇರಿ ಕೆಲವು ಜಿಲ್ಲೆಗಳಲ್ಲಿ ಇಂದಿನಿಂದ ಕಠಿಣ ಲಾಕ್ಡೌನ್ ನಿಯಮಗಳನ್ನು ಕೊಂಚ ಸಡಿಲಗೊಳಿಸಲಾಗಿದೆ. ಜೂನ್ 14ರವರೆಗೆ ಸಂಜೆಯವರೆಗೂ ಹೋಟೆಲ್, ರೆಸ್ಟೋರೆಂಟ್ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಆದರೆ, ಪಾರ್ಸಲ್ಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ರಾಜ್ಯಾದ್ಯಂತ ರೈಲು ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಬಾರ್ಗಳು, ಚಿತ್ರಮಂದಿರಗಳು, ಶಾಪಿಂಗ್ ಮಾಲ್ಗಳು, ಧಾರ್ಮಿಕ ಕೇಂದ್ರಗಳು, ಶಾಲಾ-ಕಾಲೇಜುಗಳು, ಜಾತ್ರೆಗಳು, ಸಾರ್ವಜನಿಕ ಸಮಾರಂಭಗಳಿಗೆ ನಿಷೇಧ ಹೇರಲಾಗಿದೆ.
ಕರ್ನಾಟಕದಲ್ಲಿ ನಿನ್ನೆ ಮತ್ತೆ ಕೊರೊನಾ ಕೇಸ್, ಸಾವಿನ ಸಂಖ್ಯೆಯಲ್ಲಿಯೂ ಕೊಂಚ ಇಳಿಕೆಯಾಗಿದೆ. ಪಾಸಿಟಿವಿಟಿ ರೇಟ್ ಶೇ. 7.71 ದಾಖಲಾಗಿದೆ. ಕರ್ನಾಟಕದಲ್ಲಿ ನಿನ್ನೆ 12,209 ಕೊರೊನಾ ಕೇಸ್ ಪತ್ತೆಯಾಗಿವೆ. ಭಾನುವಾರ ಒಂದೇ ದಿನ 320 ಜನ ಕೊರೋನಾಗೆ ಬಲಿಯಾಗಿದ್ದಾರೆ. 25,659 ಮಂದಿ ನಿನ್ನೆ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರಿನಲ್ಲಿ ನಿನ್ನೆ 2,944 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. 187 ಮಂದಿ ಸಾವನ್ನಪ್ಪಿದ್ದು, 10,224 ಜನರು ಡಿಸ್ಚಾರ್ಜ್ ಆಗಿದ್ದಾರೆ.