ವಿಜಯಪಥ ಸಮಗ್ರ ಸುದ್ದಿ
ಮೈಸೂರು: ಮೈಸೂರಿನ ನಿಕಟಪೂರ್ವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಅಧಿಕೃತ ನಿವಾಸದ ಒಂದು ತಿಂಗಳ ವಿದ್ಯುತ್ ಬಿಲ್ 50 ಸಾವಿರ ರೂ. ಬಂದಿದೆ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಹೇಳಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈವರೆಗೆ ಇಷ್ಟು ವಿದ್ಯುತ್ ಬಿಲ್ ಬಂದಿರಲಿಲ್ಲ, ಆದರೆ, ರೋಹಿಣಿ ಸಿಂಧೂರಿ ಅವರು ಈಜುಕೊಳ ನಿರ್ಮಾಣದ ನಂತರ ಈ ಪರಿ ಬಿಲ್ ಬಂದಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಮನೆಯಲ್ಲಿ ಮೂರು ಕೆಇಬಿ ಮೀಟರ್ ಗಳು ಇವೆ. ಸಾನಮಾನ್ಯವಾಗಿ 3- 4 ಸಾವಿರ ರೂ. ಬಿಲ್ ಬರುತ್ತದೆ. ಹೆಚ್ಚೆಂದರೆ 7 ಸಾವಿರ ಬರಬಹುದು. ಆದರೆ, ಗ್ರೇಟ್ ಸಿಂಗಂ, ದಕ್ಷ ಅಧಿಕಾರಿ, ಅದೇನ್ ಸಿಂಗಂವೋ ಅವರ ಮನೆಯ ಒಂದು ತಿಂಗಳಿಗೆ 50 ಸಾವಿರ ರೂ. ಬಿಲ್ ಬಂದಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಸಿಂಧೂರಿ ದರ್ಬಾರ್ ಬಗ್ಗೆ ವಿವರಿಸಿದ್ದರು.
ರೋಹಿಣಿ ತಮ್ಮ ಮನೆಯಲ್ಲಿ ಈಜುಕೊಳ ನಿರ್ಮಾಣ ಮಾಡಿಕೊಂಡ ನಂತರ ವಿದ್ಯುತ್ ಬಿಲ್ ಹೆಚ್ಚಾಗಿದೆ. ಪಂಪ್ ಸೆಟ್‌ಗೆ ಎಷ್ಟು ಗಂಟೆ ಕರೆಂಟ್ ಕೊಡುತ್ತಿದ್ದೀರಿ ಹೇಳಿ? ಈಜುಕೊಳಕ್ಕೆ ಕುಡಿಯುವ ನೀರನ್ನು ಬಳಕೆ ಮಾಡಿದ್ದಾರೆ. ಇದು ಬೇಲಿಯೇ ಎದ್ದು ಹೊಲ ಮೇಯ್ದಂತೆ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಈ ರೀತಿ ಸಾರ್ವಜನಿಕ ಹಣವನ್ನು ಬೇಕಾಬಿಟ್ಟಿ ಪೋಲ್ ಮಾಡುವುದು ಎಷ್ಟು ಸರಿ ಎಂಬುದನ್ನು ಪ್ರತಿಯೊಬ್ಬರೂ ಮನಗಾಣಬೇಕಿದೆ ಎಂದು ತಿಳಿಸಿದರು.