ವಿಜಯಪಥ ಸಮಗ್ರ ಸುದ್ದಿ
ಮಂಡ್ಯ: ಕೊರೊನಾ ಸೋಂಕಿಗೆ ಹೆದರಿ ಕುಟುಂಬವೊಂದು ತಮ್ಮ ಜಾನುವಾರುಗಳ ಸಹಿತ ಗ್ರಾಮ ತೊರೆದಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿಯಲ್ಲಿ ನಡೆದಿದೆ.
ಕೊರೊನಾಗೆ ಹೆದರಿ ಕುಟುಂಬ ಗ್ರಾಮ ತೊರೆದು ತಮ್ಮ ಜಮೀನಿನಲ್ಲಿ ಗುಡಿಸಲು ಹಾಕಿಕೊಂಡು ವಾಸಮಾಡುತ್ತಿದ್ದು, ಅಲ್ಲೇ ತಮ್ಮ ಸಾಕು ಪ್ರಾಣಿಗಳನ್ನು ನೋಡಿಕೊಳ್ಳುತ್ತಿದೆ.
ಕೆಲವು ದಿನಗಳ ಹಿಂದೆ ಕುಮಾರ್ ಮನೆಯ ಸಮೀಪದ ನಾಲ್ಕೈದು ಜನರಿಗೆ ಕೊರೊನಾ ಪಾಸಿಟಿವ್ ದೃಢವಾಗಿತ್ತು. ಇದರಿಂದ ಹೆದರಿದ ಕುಮಾರ್ ಊರಲ್ಲೇ ಇದ್ದರೆ ತಮಗೂ ಕೊರೊನಾ ತಗುಲಬಹುದು ಎಂದುಕೊಂಡು ಜಮೀನಿನ ಬಳಿ ಗುಡಿಸಲು ಹಾಕಿಕೊಂಡು ವಾಸ ಮಾಡುತ್ತಿದ್ದಾರೆ. ಹೀಗಾಗಿ ಕುಮಾರ್ ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕರೆದುಕೊಂಡು ಊರಬಿಟ್ಟು ಜಮೀನು ಸೇರಿದ್ದಾರೆ.
ಕುಮಾರ್ಗೆ ಊರಲ್ಲಿ ಸ್ವಂತ ಮನೆ ಇದ್ದು ಆತ ಊರು ಬಿಟ್ಟು 20 ದಿನಗಳಿಂದ ಜಮೀನಿನಲ್ಲೇ ವಾಸ ಮಾಡುತ್ತಿರುವುದರಿಂದ ಗ್ರಾಮದ ಜನರು ಆತನ ಬಳಿಗೆ ತೆರಳಿ ಧೈರ್ಯ ತುಂಬಿ ಊರಿಗೆ ಬರುವಂತೆ ಮನವೊಲಿಸಿದ್ದರಾದರೂ ಕುಮಾರ್ ಊರಿಗೆ ಬರಲು ನಿರಾಕರಿಸಿದ್ದಾರೆ.
ಈ ಬಗ್ಗೆ ಕುಮಾರ್ ಮಾತನಾಡಿ, ನಾನು ಅರ್ಧ ಎಕರೆ ಜಮೀನು ಇರುವ ಚಿಕ್ಕ ರೈತ, ಕೊರೊನಾ ವೈರಸ್ ಅಂಟಿಕೊಂಡರೆ ಜೀವ ಉಳಿಸಿಕೊಳ್ಳಲು ನನ್ನ ಬಳಿ ಹಣ ಇಲ್ಲ. ಆರು ಮತ್ತು ಏಳೂವರೆ ವರ್ಷದ ಇಬ್ಬರು ಚಿಕ್ಕ ಮಕ್ಕಳಿದ್ದಾರೆ. ಮಕ್ಕಳು, ಹೆಂಡತಿ ಮತ್ತು ನನ್ನ ಕ್ಷೇಮದ ದೃಷ್ಟಿಯಿಂದ ಊರು ಬಿಟ್ಟು ಬಂದಿದ್ದೇನೆ. ಕೊರೊನಾ ವೈರಸ್ ಹಾವಳಿ ಸಂಪೂರ್ಣ ನಿಲ್ಲುವವರೆಗೆ ಊರಿಗೆ ಮರಳುವುದಿಲ್ಲ ಎಂದು ತಿಳಿಸಿದ್ದಾರೆ.