ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕೋವಿಡ್ ಸಂಕಷ್ಟದಿಂದ ಬೆಂಡಾಗಿರುವ ರಾಜ್ಯದ ಜನತೆಗೆ ವಿದ್ಯುತ್ ಬೆಲೆ ಏರಿಕೆಯ ಬರೆ ಎಳೆಯಲು ಹೊರಟಿರುವ ರಾಜ್ಯ ಸರ್ಕಾರದ ನಡೆ ಖಂಡನೀಯ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಹ ಸಂಚಾಲಕಿ ಶಾಂತಲಾ ದಾಮ್ಲೆ ಹೇಳಿದ್ದಾರೆ.
ನಗರದ ಪಕ್ಷದ ಕಚೇರಿಯಲ್ಲಿ ಇಂದು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನವೆಂಬರ್ 1- 2020 ರ ನಂತರ ಪ್ರತೀ ಯೂನಿಟ್‌ಗೆ 40 ಪೈಸೆ (6%) ಏರಿಕೆಯಾಗಿದ್ದ ವಿದ್ಯುತ್ ಬೆಲೆಗೆ ಸರಕಾರ ಪ್ರತೀ ಯೂನಿಟ್‌ಗೆ 30 ಪೈಸೆ (4%) ಏರಿಸಿ ಈಗಾಗಲೇ ಕೋವಿಡ್ ಲಾಕ್ ಡೌನ್ ಪರಿಣಾಮ ಆರ್ಥಿಕ ಸಂಕಷ್ಟದಲ್ಲಿ ಇರುವ ಜನತೆಯ ಮೇಲೆ ಸರಕಾರ ದೊಡ್ಡ ಹೊರೆಯನ್ನು ಹಾಕಿದೆ. ಜನಸಾಮಾನ್ಯ ಬಳಸುವ ತಿಂಗಳ 200 ಯೂನಿಟ್ ವಿದ್ಯುತ್ ಗೆ 1,260 ರೂಪಾಯಿ ಪಾವತಿ ಮಾಡಬೇಕು, ವರ್ಷಕ್ಕೆ 15,000 ರೂಪಾಯಿಯಾಗುತ್ತದೆ ಎಂದರು.
ದೆಹಲಿಯ ವಿದ್ಯುತ್ ದರದ ಜತೆಗೆ ತುಲನೆ
ದೆಹಲಿಯ ಜನತೆ ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ಬಳಸುತ್ತಾರೆ. ದೆಹಲಿಯ 70% ಜನ ವಿದ್ಯುತ್ ಬಿಲ್ ಪಾವತಿಸುವುದೇ ಇಲ್ಲ! ಕಳೆದ ಆರು ವರ್ಷಗಳಲ್ಲಿ ವಿದ್ಯುತ್ ಬೆಲೆ ಏರಿಕೆಯಾಗಿಯೇ ಇಲ್ಲ!
ಕರ್ನಾಟಕವು ಲಭ್ಯವಿರುವ ಎಲ್ಲಾ ನೈಸರ್ಗಿಕ ಮೂಲಗಳನ್ನು ಅಂದರೆ ನೀರು, ಗಾಳಿ ಮತ್ತು ಸೌರ ಶಕ್ತಿಯನ್ನು ಬಳಸಿ ವಿದ್ಯುತ್ ಉತ್ಪಾದಿಸುತ್ತದೆ. ಹೀಗಿದ್ದೂ ಸರಕಾರ ವಿದ್ಯುತ್ ಬೆಲೆ ಏರಿಸಿ ಜನತೆಯನ್ನು ಯಾಕೆ ಹಿಂಸಿಸುತ್ತಿದ್ದಾರೆ? ವಿದ್ಯುತ್ ನಿರ್ವಹಣೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆಯೇ?
ಕಳೆದ ಎರಡು ವರ್ಷಗಳಿಂದ ಕರ್ನಾಟಕ ಸರ್ಕಾರ ಅದಾನಿ ಗ್ರೂಪ್ ನಿಂದ ಖರೀದಿ ಮಾಡುತ್ತಿರುವ ವಿದ್ಯುತ್‌ನ ಬೆಲೆ ಸತತವಾಗಿ ಏರುತ್ತಿದೆ. ಬೆಸ್ಕಾಂ ಅದಾನಿಯಿಂದ ಖರೀದಿಸುವ ವಿದ್ಯುತ್ ಬೆಲೆ ಪ್ರತೀ kwh ಗೆ 4.78 ರೂಪಾಯಿಯಿಂದ 6.80 ರೂಪಾಯಿಗೆ ಏರಿದೆ, ಒಟ್ಟಾರೆ 2.02 ರೂಪಾಯಿ (42%) ಏರಿಕೆ!
ಇಂದು ಕರ್ನಾಟಕದ ಬಹುತೇಕ ಉದ್ದಿಮೆಗಳು ನಷ್ಟದಲ್ಲಿ ಇರುವಾಗ ಅದಾನಿ ಪವರ್ ಗೆ 50% ಲಾಭ ವನ್ನು ತಂದು ಕೊಟ್ಟಿದೆ. ಅಂದರೆ 2021 ರ ಆರ್ಥಿಕ ವರ್ಷದಲ್ಲಿ 3,500 ಕೋಟಿ ರೂಪಾಯಿ ಲಾಭ ಗಳಿಸಿದೆ. ಇದನ್ನು ಸ್ವತಃ ಕಂಪನಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ವರ್ಷ ಕಲ್ಲಿದ್ದಿಲಿನ ಬೆಲೆ ಇಳಿದಿದ್ದರೂ ಅದಾನಿ ಪವರ್ ಕರ್ನಾಟಕ ಸರಕಾರಕ್ಕೆ ಅಧಿಕ ಬೆಲೆಗೆ ಕಲ್ಲಿದ್ದಲನ್ನು ಮಾರಿತ್ತು. ಆ ಸಂದರ್ಭದಲ್ಲಿ ಸ್ವತಃ ಮುಖ್ಯಮಂತ್ರಿಗಳೇ ವಿದ್ಯುತ್ ಖಾತೆಯನ್ನು ಹೊಂದಿದ್ದರು. ಸ್ವತಃ ರಾಜ್ಯ ಆರ್ಥಿಕ ಮುಗ್ಗಟ್ಟಿನಲ್ಲಿ ಬಳಲಿ ಹೋಗಿದ್ದಾಗ ಯಡಿಯೂರಪ್ಪನವರಿಗೆ ಜನರ ದುಡ್ಡಿನಿಂದ ಅದಾನಿ ಪವರ್‌ನ ಜೇಬು ತುಂಬಿಸುವ ನೀಚ ಮನಸ್ಸಾದರೂ ಹೇಗೆ ಬಂತು?
ಈಗ ಕರ್ನಾಟಕ ಸರಕಾರ ವಿದ್ಯುತ್ ಬೆಲೆಯ ಬಗ್ಗೆ ಸೂಕ್ತ ನಿಲುವು ತೆಗೆದುಕೊಳ್ಳಬೇಕು. ದೆಹಲಿ ಸರ್ಕಾರದ ಹಾಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಿ ಜನತೆಯನ್ನು ಆರ್ಥಿಕ ಸಂಕಷ್ಟದಿಂದ ಪಾರುಮಾಡಬೇಕು.
ಆಮ್ ಆದ್ಮಿ ಪಾರ್ಟಿಯ ಆಗ್ರಹ ಏನು?
1. ಸರಕಾರ ಈಗ ಜಾರಿಯಲ್ಲಿರುವ ಬೆಲೆ ಏರಿಕೆಯನ್ನು ಸ್ಥಗಿತಗೊಳಿಸಿ ಕರ್ನಾಟಕದ ಜನತೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಬೇಕು.
2. ಅದಾನಿ ಪವರ್ ಗೆ ಕಳೆದ ವರ್ಷ ಸರಕಾರ ಪಾವತಿಸಿರುವ ಏರಿಕೆಯ ಬೆಲೆಯನ್ನು ಹಿಂಪಡೆಯಬೇಕು. ಕಡಿಮೆ ಬೆಲೆಯ ಕೋಲ್ ಅನ್ನು ಹೆಚ್ಚಿನ ಬೆಲೆಗೆ ಸರಕಾರಕ್ಕೆ ಮಾರಿ ಪಡೆದ ಲಾಭವನ್ನು ಸರಕಾರ ಮರುಪಡೆಯಬೇಕು.
3. ಅದಾನಿ ಪವರ್ ಜತೆಗೆ ವಿದ್ಯುತ್ ಬೆಲೆ ಕುರಿತು ಸಮರ್ಪಕ ಮಾತುಕತೆ ನಡೆಸದೇ ರಾಜ್ಯಕ್ಕೆ ನಷ್ಟ ಉಂಟು ಮಾಡಿರುವ ಸಚವರು ಹಾಗೂ ಅಧಿಕಾರಿಗಳನ್ನು ವಜಾಗೊಳಿಸಿ.
4. ಕೋವಿಡ್ ಸೋಂಕಿನ ಮಧ್ಯೆ ಜನತೆ ಆರ್ಥಿಕ ಸಂಕಷ್ಟದಿಂದ ನರಳುತ್ತಿರುವ ಸಂದರ್ಭದಲ್ಲಿ ವಿದ್ಯುತ್ ಬೆಲೆ ಏರಿಸಿ ಲೂಟಿ ಮಾಡುತ್ತಿರುವುದು ಯಾಕೆ? ಅದಾನಿ ಪವರ್ ಗೆ ಯಾಕೆ ಹೆಚ್ಚಿನ ಬೆಲೆಯನ್ನು ಪಾವತಿಸುತ್ತಿದೆ? ಈ ಪ್ರಶ್ನೆಗಳಿಗೆ ಮುಖ್ಯಮಂತ್ರಿಗಳು ಉತ್ತರಿಸಬೇಕು.
ಸರ್ಕಾರ ತಕ್ಷಣವೇ 200 ಯೂನಿಟ್ ಉಚಿತ ವಿದ್ಯುತ್ ನೀಡಬೇಕು. ಇದರಿಂದ ಬಿಜೆಪಿ ಯ ಶ್ರೀಮಂತರಿಗೆ ಮಾತ್ರವಲ್ಲ, ಜನ ಸಾಮಾನ್ಯನಿಗೂ ಲಾಭವಿದೆ. ಉಚಿತ ವಿದ್ಯುತ್ ಗಾಗಿ ಆಮ್ ಆದ್ಮಿ ಪಾರ್ಟಿ ಆಂದೋಲನವನ್ನು ನಡೆಸಲಿದೆ ಎಂದು ತಿಳಿಸಿದರು.
ಪಕ್ಷದ ರಾಜ್ಯ ನೀತಿ ಸಂಶೋಧನಾ ವಿಭಾಗದ ಮುಖ್ಯಸ್ಥ ಪ್ರಕಾಶ್ ನೆಡುಂಗಾಡಿಯವರು ಉಪಸ್ಥಿತರಿದ್ದರು.