ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕೇಂದ್ರ ಸರಕಾರ ನಿರಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡುತ್ತಿರುವುದನ್ನು ಖಂಡಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆ ವಿಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ 100 ನಾಟೌಟ್, ಪೆಟ್ರೋಲ್ ಪಿಕ್ಪಾಕೆಟ್ ಪ್ರತಿಭಟನೆ ನಡೆಯುತ್ತಿದೆ.
ಶುಕ್ರವಾರ ಬೆಂಗಳೂರಿನ ಶಿವಾನಂದ ವೃತ್ತದ ಬಳಿ ರೆಡ್ಡಿ ಪೆಟ್ರೋಲ್ ಬಂಕ್ ಸಮೀಪ 100 ನಾಟೌಟ್, ಪೆಟ್ರೋಲ್ ಪಿಕ್ಪಾಕೆಟ್ ಪ್ರತಿಭಟನೆ ಹಮ್ಮಿಕೊಂಡ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವರಾದ ಆರ್.ವಿ. ದೇಶಪಾಂಡೆ, ದಿನೇಶ್ ಗುಂಡೂರಾವ್ ಮತ್ತಿತರರು ಪಾಲ್ಗೊಂಡಿದ್ದಾರೆ. ಈ ಪ್ರತಿಭಟನೆಯೂ ಇಂದಿನಿಂದ ಹಂತ-ಹಂತವಾಗಿ ರಾಜ್ಯಾದ್ಯಂತ ಐದು ದಿನಗಳ ಕಾಲ ನಡೆಯಲಿದೆ.
ಇನ್ನು ಬೆಂಗಳೂರಿನ ವಸಂತಪುರಂ ಪೆಟ್ರೋಲ್ ಬಂಕ್ ಬಳಿ ಕಾಂಗ್ರೆಸ್ ಕಾರ್ಯಕರ್ತರು ಪ್ಲೇಟ್ ಸ್ಪೂನ್ ಹಿಡಿದು ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ. ಕೂಡಲೇ ಪೆಟ್ರೋಲ್ ದರ ಇಳಿಸಬೇಕು ಪೆಟ್ರೋಲ್ ದರ ಏರಿಕೆಯಿಂದಾಗಿ ಸಾರ್ವಜನಿಕರು ಹಲವು ಸಮಸ್ಯೆಗೆ ಸಿಲಿಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸೆಕ್ಷನ್ 144 ಜಾರಿ ಇದ್ದರೂ ಪ್ರತಿಭಟನೆ ಹಿನ್ನೆಲೆಯಲ್ಲಿ ಹೈಗ್ರೌಂಡ್ಸ್ ಠಾಣೆ ಪೊಲೀಸರು ಕೈ ನಾಯಕರನ್ನು ವಶಕ್ಕೆ ಪಡೆದಿದ್ದು ಮುಚ್ಚಳಿಕೆ ಹಾಗೂ ಇತರ ಮಾಹಿತಿ ಪಡೆದು ಬಿಟ್ಟು ಕಳುಹಿಸಿದ್ದಾರೆ.
ಭಾರತದಲ್ಲಿ ಇಂಧನ ದರ 100ರ ಗಡಿ ದಾಟಿದೆ. (Petrol Diesel price 100 not out) ಹೀಗಾಗಿ ಇಂಧನ ಬೆಲೆ ಏರಿಕೆ ಮತ್ತು ಹೆಚ್ಚುತ್ತಿರುವ ಹಣದುಬ್ಬರ ವಿರುದ್ಧ ಕಾಂಗ್ರೆಸ್ ಇಂದು ಸಾಂಕೇತಿಕ ಪ್ರತಿಭಟನೆ ನಡೆಸಿದೆ. ಎಲ್ಲಾ ಕೋವಿಡ್ ನಿಯಮಗಳನ್ನು ಅನುಸರಿಸಿ ಪ್ರತಿಭಟನೆ ಮಾಡಲು ಕಾರ್ಯಕರ್ತರಿಗೆ ಸೂಚಿಸಲಾಗಿದೆ.
ದೆಹಲಿಯಲ್ಲಿ ಪವನ್ ಬನ್ಸಾಲ್, ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ಹರೀಶ್ ರಾವತ್ ಮತ್ತು ಅಜಯ್ ಮಾಕೆನ್ ವಿವಿಧ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಹಿರಿಯ ನಾಯಕರೊಂದಿಗೆ, ಯುವ ನಾಯಕರಾದ ಗೌರವ್ ಗೊಗೊಯ್, ದೇವೇಂದ್ರ ಯಾದವ್, ದೆಹಲಿ ಉಸ್ತುವಾರಿ ಶಕ್ತಿ ಸಿಂಗ್ ಗೋಹಿಲ್ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.
ಹಿಂದಿನ ಯುಪಿಎ ಸರ್ಕಾರಕ್ಕೆ ಹೋಲಿಸಿದರೆ ಬಿಜೆಪಿ ಸರ್ಕಾರ ಅಬಕಾರಿ ಸುಂಕವನ್ನು ಪೆಟ್ರೋಲ್ಗೆ 23.87 ರೂ. ಮತ್ತು ಡೀಸೆಲ್ಗೆ 28.37 ರೂ.ಗಳನ್ನು ಹೆಚ್ಚಿಸಿದೆ. ತಪ್ಪು ನೀತಿಗಳು ಮತ್ತು ಭಾರಿ ತೆರಿಗೆಗಳಿಂದಾಗಿ ದೇಶದ ಅನೇಕ ಭಾಗಗಳಲ್ಲಿ ಪೆಟ್ರೋಲ್ ಬೆಲೆ 100 ರೂ. ದಾಟಿದೆ ಮತ್ತು ಡೀಸೆಲ್ ಬೆಲೆ ಲೀಟರ್ಗೆ 100 ರೂ.ಗಳನ್ನು ದಾಟಲಿದೆ ಎಂದು ವೇಣುಗೋಪಾಲ್ ಕಿಡಿಕಾರಿದ್ದಾರೆ..