ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಪೋಷಕರು ಶಾಲಾ ಶುಲ್ಕ ಕಟ್ಟಲಾಗದೆ ಹೈರಾಣಾಗಿದ್ದಾರೆ, ಸಾವಿರಾರು ಮಕ್ಕಳು ಶಿಕ್ಷಣ ತ್ಯಜಿಸಿದ್ದಾರೆ. ಕೋರ್ಟ್ ನೇಮಿಸುವ ಸಮಿತಿಯು ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸುತ್ತದೆ. ಈ ಸಮಸ್ಯೆಗೆ ಶೀಘ್ರ ಮತ್ತು ಸಮಾಧಾನಕರ ಪರಿಹಾರ ಬೇಕು. ಇದರ ಬಗ್ಗೆ ಚರ್ಚೆ ಮಾಡೋಣ ಬನ್ನಿ, ಆದಷ್ಟೂ ಬೇಗ ಚರ್ಚೆಗೆ ಸಮಯ ನಿಗದಿ ಮಾಡಿ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕರಾದ ಪೃಥ್ವಿ ರೆಡ್ಡಿ ಶಿಕ್ಷಣ ಸಚಿವರನ್ನು ಒತ್ತಾಯಿಸಿದ್ದಾರೆ.
ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವ ಶಿಕ್ಷಣ ವ್ಯವಸ್ಥೆಯ ವಿದ್ಯಮಾನಗಳ ಬಗ್ಗೆ ಸರ್ಕಾರ ಹಾಗೂ ಶಿಕ್ಷಣ ಸಚಿವರು ಸಂದಿಗ್ಧತೆಯ ನಿವಾರಣೆಗಾಗಿ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳದೆ ನ್ಯಾಯಾಲಯಗಳಲ್ಲಿ ಕಾಲಹರಣ ಮಾಡುವ ತಂತ್ರಗಾರಿಕೆಯಲ್ಲಿ ನಿರತರಾಗಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಇಂಥ ನಡೆಯನ್ನು ಬಿಟ್ಟು ದೆಹಲಿ ರಾಜ್ಯದಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಸರ್ಕಾರ ಈ ರೀತಿಯ ಶೈಕ್ಷಣಿಕ ಸಂದಿಗ್ಧತೆಗಳ ಬಗ್ಗೆ ತೆಗದುಕೊಂಡಿರುವ ಐತಿಹಾಸಿಕ ಕ್ರಮಗಳ ಕುರಿತಂತೆ ತಮ್ಮ ಸಲಹೆ ಸೂಚನೆಗಳನ್ನು ನೀಡುವಲ್ಲಿ ಶಿಕ್ಷಣ ಸಚಿವರಿಗೆ ಸಮಯಾವಕಾಶವನ್ನು ಕೇಳಿದ್ದಾರೆ.