ವಿಜಯಪಥ ಸಮಗ್ರ ಸುದ್ದಿ
ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸ್ವಕ್ಷೇತ್ರದಲ್ಲಿ ಪರಿಶಿಷ್ಟ ಜನಾಂಗದ ಜನರು 40ವರ್ಷಗಳಿಂದಲೂ ವಾಸಿಸುತ್ತಿರುವ ಭೂಮಿಯ ಹಕ್ಕು ನೀಡದಿದ್ದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.
ಶಿಕಾರಿಪುರದ ಮಾಯತಮ್ಮನ ಮುಚುಡಿ ಗ್ರಾಮದ ಪರಿಶಿಷ್ಟ ಸಮುದಾಯದ ಕುಟುಂಬಗಳು ಹಾಗೂ ಮೇಲ್ಜಾತಿಯವರ ನಡುವೆ ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆಯುತ್ತಿದೆ.
ಈ ಸಂಬಂಧ ಬುಧವಾರ ತಹಸೀಲ್ದಾರ್ ಕವಿರಾಜ್ ಪೊಲೀಸರೊಂದಿಗೆ ಭೇಟಿನೀಡಿ ಪರಿಶಿಷ್ಟ ಸಮುದಾಯದವರು ಬಿತ್ತನೆ ಮಾಡಿದ್ದ ಜಮೀನಿನ ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ನಾಶಗೊಳಿಸಿದರು. ಈ ವೇಳೆ ಪರಿಶಿಷ್ಟ ಸಮುದಾಯದ ಕುಟುಂಬದವರು ಸಾಮೂಹಿಕ ಆತ್ಮಹತ್ಯೆ ಬೆದರಿಕೆ ಹಾಕಿದ್ದಾರೆ. ಇದರಿಂದ ವಿಚಲಿತರಾದ ತಹಸೀಲ್ದಾರ್ ಭೂಮಿ ವಶಪಡಿಸಿಕೊಳ್ಳುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಆದೇಶಿಸಿದ್ದಾರೆ.
ಮುಚುಡಿ ಗ್ರಾಮದ ಪರಿಶಿಷ್ಟ ಸಮುದಾಯದ 19 ಕುಟುಂಬಗಳು 40 ವರ್ಷಗಳಿಂದ ಸರ್ವೆ ನಂಬರ್ 128ರಲ್ಲಿ ತಲಾ 2 ಹಾಗೂ 3 ಎಕರೆಯಂತೆ ಬಗರ್‌ಹುಕುಂ ಸಾಗುವಳಿ ಮಾಡಿಕೊಂಡು ಬರುತ್ತಿದ್ದರು. ಮಂಜೂರಾತಿಗಾಗಿ 1991ರಲ್ಲಿ ಆ ಕುಟುಂಬಗಳವರು 53 ಅರ್ಜಿಗಳನ್ನು ಸಲ್ಲಿಸಿದ್ದಾರೆ. ಆದರೆ ಇವರಿಗೆ ಭೂಮಿ ನೀಡಿಲ್ಲ. ತಾಲೂಕು ಆಡಳಿತ ಕಂದಾಯ ಇಲಾಖೆಯ ಭೂಮಿ ಎಂದು ಹೇಳುತ್ತಿದೆ. ಆದರೆ ಎಕರೆ ಗಟ್ಟಲೆ ಭೂಮಿಯನ್ನು ಅದೇ ಪ್ರದೇಶದಲ್ಲಿ ಮೇಲ್ವರ್ಗದವರಿಗೆ ನೀಡಲಾಗಿದೆ ಎಂದು ಪರಿಶಿಷ್ಟ ಜಾತಿ ಜನರು ಆರೋಪಿಸಿದ್ದಾರೆ.