ವಿಜಯಪಥ ಸಮಗ್ರ ಸುದ್ದಿ
ಮೈಸೂರು: ಕೊರೊನಾ ಸೋಂಕು ದೃಢಪಟ್ಟಿದ್ದ ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ಹೆಣ ಇಟ್ಟುಕೊಂಡು ಬಾಕಿ ಹಣ ಕಟ್ಟುವಂತೆ ಬೇಡಿಕೆಯಿಟ್ಟು ಶವ ನೀಡಲು ಆಸ್ಪತ್ರೆ ಹಿಂದೇಟು ಹಾಕಿತ್ತು. ನಂತರ ನಡೆದ ಬೆಳವಣಿಗೆಯಲ್ಲಿ ಶವಸಂಸ್ಕಾರಕ್ಕೂ ಆ ಆಸ್ಪತ್ರೆಯೇ ಹಣ ಕೊಟ್ಟು, ಶವ ಹಸ್ತಾಂತರ ಮಾಡಿದೆ.
ನಗರದ ರಾಮನುಜ ರಸ್ತೆಯ ನಿವಾಸಿ ವಾಚ್ ಮನ್ ಆಗಿ ಕೆಲಸ ಮಾಡುತ್ತಿದ್ದ ಮಹದೇವು ಎಂಬವರ ಪತ್ನಿಗೆ ಕೊರೊನಾ ಸೋಂಕು ತಗುಲಿತ್ತು. ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಆದರೆ, ಮೃತದೇಹ ನೀಡಲು ಸತಾಯಿಸುತ್ತಿದ್ದು ಶವ ನೀಡಲು 2 ಲಕ್ಷ ರೂ.ಗಳನ್ನು ಕಟ್ಟುವಂತೆ ಒತ್ತಡ ಹೇರಿದ್ದರು.
ಈ ವಿಷಯ ತಿಳಿದ ಕೂಡಲೇ ಆಸ್ಪತ್ರೆಗೆ ತಕ್ಷಣವೇ ಭೇಟಿ ನೀಡಿದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಅವರು, ʻಮೃತ ರಾಜೇಶ್ವರಿ ಮನೆಗೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಇಬ್ಬರು ಚಿಕ್ಕ ಮಕ್ಕಳಿದ್ದಾರೆ. ಈಗ ಶವವನ್ನು ಇಟ್ಟುಕೊಂಡು ಹಣ ಕೊಡಿ ಅಂದರೆ ಎಲ್ಲಿಂದ ಕೊಡುತ್ತಾರೆ. ಕೂಡಲೇ ಕುಟುಂಬದವರಿಗೆ ಶವ ಕೊಡಿ ಎಂದು ಆಸ್ಪತ್ರೆಯ ವ್ಯವಸ್ಥಾಪನಾ ಮಂಡಳಿಗೆ ತಿಳಿಸಿದರು.
ಅಷ್ಟೇ ಅಲ್ಲದೇ ಬೆಳಗ್ಗೆ ಆಸ್ಪತ್ರೆಗೆ ಕಟ್ಟಿದ್ದ 20 ಸಾವಿರ ರೂ.ಗಳನ್ನು ಅಂತ್ಯಕ್ರಿಯೆ ನೆರವೇರಿಸುವುದಕ್ಕೆ ನೀಡುವಂತೆ ತಿಳಿಸಿ ಮೃತರ ಪತಿಗೆ ಹಣ ಕೊಡಿಸಿದರು. ಜತೆಗೆ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವವರೆಗೂ ತಾವೇ ಖುದ್ಧು ನಿಂತು ಸಹಕರಿಸಿದರು. ಈ ಮೂಲಕ ಮೃತರ ಕುಟುಂಬಕ್ಕೆ ನೆರವಿನ ಹಸ್ತ ಚಾಚಿದ ಸೋಮಶೇಖರ್ ಅವರಿಗೆ ಮೃತರ ಕುಟುಂಬದವರು ನೋವಿನಲ್ಲೂ ಅಭಿನಂದನೆ ಸಲ್ಲಿಸಿದರು.
ಈ ವೇಳೆ ನಾಸೀರ್, ಗುಣಶೇಖರ್, ಹರೀಶ್, ರವಿ ಇದ್ದರು.