ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಹಂತದ ಅನ್ಲಾಕ್ ಆದ ಬಳಿಕ ಸಾರಿಗೆ ಬಸ್ಗಳ ಓಡಾಟಕ್ಕೆ ಅವಕಾಶ ಇದ್ದರೂ ಪರಿಪೂರ್ಣ ಬಸ್ ವ್ಯವಸ್ಥೆಯಿಲ್ಲದೆ ರಾಜ್ಯದ ಜನ ಪರದಾಡುತ್ತಿದ್ದಾರೆ. ಆದರೆ ಇತ್ತ ಸಾರಿಗೆ ಸಚಿವ ಲಕ್ಷ್ಮಣ ಸವದಿ ಸಮಸ್ಯೆ ಬಗೆಹರಿಸುವ ಬಗ್ಗೆ ಯೋಚನೆ ಮಾಡದೇ, ಸಾರಿಗೆ ಸಮಸ್ಯೆಯಾದಾಗ ಜನರೇ ಸಹಿಸಿಕೊಳ್ಳಬೇಕು ಎಂದು ಉಡಾಫೆಯ ಹೇಳಿಕೆ ನೀಡಿದ್ದಾರೆ.
ಸಾರಿಗೆ ಸಮಸ್ಯೆಯ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೊರೊನಾ ಲಾಕ್ಡೌನ್ ಬಳಿಕ ರಾಜ್ಯದಲ್ಲಿ ಅನ್ಲಾಕ್ ಘೋಷಣೆಯಾಗಿದೆ. ಪ್ರಾರಂಭದಲ್ಲಿ ಈ ರೀತಿಯ ಸಮಸ್ಯೆ ಆಗೋದು ಸಹಜ. ಸಮಸ್ಯೆ ಬಗೆಹರಿಸುವ ಬಗ್ಗೆ ಅಧಿಕಾರಿಗಳ ಜತೆ ಮಾತನಾಡುತ್ತೇನೆ ಎಂದು ತಿಳಿಸಿದರು.
ಪ್ರಾರಂಭದ ದಿನವಾಗಿರುವುದರಿಂದ ಈ ರೀತಿಯ ವ್ಯತ್ಯಾಸ ಆಗಿದೆ. ನಾಳೆ ಯಾವುದೇ ರೀತಿಯ ತೊಂದರೆ ಇಲ್ಲದೆ ಸಮಸ್ಯೆ ಬಗೆಹರಿಯಲಿದೆ. ಈ ರೀತಿ ಸಮಸ್ಯೆಗಳಾದಾಗ ಜನ ಸ್ವಲ್ಪ ಸಹಿಸಿಕೊಳ್ಳಬೇಕು. ಉತ್ತರ ಕರ್ನಾಟಕದ ಸಿಬ್ಬಂದಿ ಇನ್ನೂ ಸಹ ಕೆಲಸಕ್ಕೆ ಹಾಜರಾಗಿಲ್ಲ. ನಾಳೆ ಬಳಿಕ ಸಾರಿಗೆ ಸಿಬ್ಬಂದಿ ಕೆಲಸಕ್ಕೆ ಬರಲಿದ್ದಾರೆ. ಸಮಸ್ಯೆ ಹಂತಹಂತವಾಗಿ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆದರೆ, ಇಂದು ಡಿಪೋಗಳಲ್ಲಿ ಹಾಜರಾದ ಸಿಬ್ಬಂದಿಗೆ ಕೆಲಸ ಕೊಡದೆ ವಾಪಸ್ ಕಳುಹಿಸಿದ್ದಾರೆ. ಈ ಬಗ್ಗೆ ಸಚಿವರು ಮೊದಲು ಮಾತನಾಡಬೇಕಿತ್ತು. ಅದನ್ನು ಬಿಟ್ಟು ಈ ರೀತಿಯ ಉಡಾಫೆ ಉತ್ತರ ಕೊಡುವುದು ಸರಿಯಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಂದು ವಾರದ ಹಿಂದೆಯೇ RT PCR ಟೆಸ್ಟ್ ರಿಪೋರ್ಟ್ ಸಂಗ್ರಹಿಸಿಕೊಂಡು ಜತೆಗೆ ಲಸಿಕೆ ಪಡೆದ ವರದಿಯನ್ನು ತೆಗೆದುಕೊಂಡು ಡಿಪೋಗಳಿಗೆ ಸಿಬ್ಬಂದಿ ಹೋದರೆ ನೀವು ತಂದಿರುವ ಕೋವಿಡ್ ಟೆಸ್ಟ್ ವರದಿ ಹಳೆಯದಾಗಿದೆ 72 ಗಂಟೆಯೊಳಗೆ ಟೆಸ್ಟ್ ಮಾಡಿಸಿರುವ ರಿರ್ಪೋಟ್ ತೆಗೆದುಕೊಂಡು ಬರಬೇಕು ಎಂದು ವಾಪಸ್ ಕಳುಹಿಸಿದ್ದರಿಂದ ಈ ಸಮಸ್ಯೆ ಆಗಿದೆ ಎಂದು ಹೆಸರೇಳಲಿಚ್ಛಿಸದ ಅಧಿಕಾರಿಯೊಬ್ಬರು ವಿಜಯಪಥಕ್ಕೆ ತಿಳಿಸಿದ್ದಾರೆ.
ಯಾವ ಇಲಾಖೆಯ ನೌಕರರಿಗೂ ಇಲ್ಲದ ಕಾನೂನು ಇಲ್ಲಿವೆ
ನಮ್ಮ ನಿಗಮಗಳಲ್ಲಿ ಯಾವ ಇಲಾಖೆಯ ನೌಕರರಿಗೂ ಇಲ್ಲದ ಕಾನೂನುಗಳನ್ನು ನಮ್ಮ ಮೇಲೆ ಹೇರುತ್ತಿದ್ದಾರೆ. ಒಂದು ವಾರ ರಜೆ ತೆಗೆದುಕೊಂಡು ಮತ್ತೆ ಕರ್ತವ್ಯಕ್ಕೆ ಹಾಜರಾದರೆ ನಾನು ಕರ್ತವ್ಯಕ್ಕೆ ಹಾಜರಾಗುತ್ತಿದ್ದೇನೆ ಎಂದು ಬರೆದುಕೊಡಬೇಕು.
ಈ ಬಗ್ಗೆ ನಾವೇನು ಹೊಸದಾಗಿ ಕೆಲಸಕ್ಕೆ ಸೇರುತ್ತಿದ್ದೇವಾ? ಎಂಬುವುದು ಸೇರಿದಂತೆ ಸಾರಿಗೆ ಸಂಸ್ಥೆಯಲ್ಲಿ ಮಾಡಿರುವ ಇಂಥ ಅನೇಕ ನಿಯಮಗಳನ್ನು ಪ್ರಶ್ನಿಸಲು ನೌಕರರು ಅಸಹಾಯಕರಾಗಿದ್ದಾರೆ. ಇನ್ನು ನಾವು ಇದೆಲ್ಲ ಬೇಕಿದೆಯೇ ಎಂದು ಮೇಲಧಿಕಾರಿಗಳಿಗೆ ಕೇಳಿದರೆ ನಿಮಗೆ ವಹಿಸಿರುವ ಕೆಲಸವನ್ನಷ್ಟೆ ಮಾಡಿ ಎಂದು ಹೇಳುತ್ತಾರೆ ಎಂದು ಆ ಅಧಿಕಾರಿ ತಿಳಿಸಿದ್ದಾರೆ.
ಒಟ್ಟಾರೆ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಇರುವ ಇಂಥ ಅನೇಕ ನಿಯಮಗಳಿಂದ ಸಾರಿಗೆ ಸಿಬ್ಬಂದಿ ಇತ್ತ ಸಾರ್ವಜನಿಕರಿಬ್ಬರೂ ಸಮಸ್ಯೆಗೆ ಸಿಲುಕುವಂತಾಗಿದೆ.