ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ದಿದ್ದಿಗಿ ಗ್ರಾಮ ಪಂಚಾಯಿತಿಯ ಪ್ರಭಾರ ಪಿಡಿಒ ಹಾಗೂ ಕಾರ್ಯದರ್ಶಿ ಸಿ.ಎಚ್. ಶ್ರೀನಿವಾಸ್, ಉಚ್ವಂಗಿಪುರದ ಸದಸ್ಯ ಬಾಲರಾಜ್ ಎಂಬುವರು ಲಂಚಕ್ಕೆ ಬೇಡಿಕೆಯಿಟ್ಟ ಆರೋಪ ಕೇಳಿಬಂದಿದೆ.
ವಾಟರ್ಮನ್ (ನೀರಗಂಟೆ) ಹುದ್ದೆಗೆ ಅಂಜಿನಪ್ಪ ಎನ್ನುವವರ ಬಳಿ 1.60 ಲಕ್ಷ ರೂ. ನೀಡುವಂತೆ ಇವರು ಬೇಡಿಕೆಯಿಟ್ಟಿದ್ದಾರೆ. ಅದು ಆಡಿಯೋ ರೂಪದಲ್ಲಿ ದಾಖಲಾಗಿದ್ದು, ವಾಟರ್ಮನ್ ಹುದ್ದೆಗೆ ಲಕ್ಷ ಲಕ್ಷ ಲಂಚದ ಬೇಡಿಕೆಯ ಆಡಿಯೋ ಕೇಳಿ ಜನ ಹುಬ್ಬೇರಿಸಿದ್ದಾರೆ.
ಲಕ್ಷಾಂತರ ರೂಪಾಯಿ ನೀಡಿದರೆ ಅದೇಶ ಪತ್ರ ಕೊಡಿಸುವುದಾಗಿ ಪಿಡಿಒ ಹಾಗೂ ಗ್ರಾಪಂ ಸದಸ್ಯ ಹೇಳಿರುವುದು ಆಡಿಯೋದಲ್ಲಿದೆ. ಅದಕ್ಕೆ ಎರಡು ವರ್ಷಗಳಿಂದ ಸಂಬಳವಿಲ್ಲದೆ ಕೆಲಸ ಮಾಡುತ್ತಿದ್ದೇನೆ. ಈಗ ಲಕ್ಷಾಂತರ ರೂಪಾಯಿ ಹೇಗೆ ಜೋಡಿಸಲಿ. ಮನೆಯಲ್ಲಿ ಹೆಂಡತಿ ಮಕ್ಕಳು ಉಪವಾಸ ಇರ್ತಾರೆ. ಹಣ ಜೋಡಿಸಲು ಸಾಧ್ಯವಿಲ್ಲ ಎಂದು ಹುದ್ದೆಯ ಆಕಾಂಕ್ಷಿ ಅಂಜಿನಪ್ಪ ತನ್ನ ಅಳಲು ತೋಡಿಕೊಂಡಿದ್ದಾನೆ.
ನೀರಗಂಟಿ ಹುದ್ದೆಗೆ 8 ರಿಂದ 10 ಲಕ್ಷ ಕೊಟ್ಟು ಎಂಎ, ಎಂಇಡಿ ಓದಿದವರೇ ಬರೋಕೆ ರೆಡಿ ಇದ್ದಾರೆ ಎಂದು ರಾಜರೋಷವಾಗಿ ಆರೋಪಿಗಳು ಲಂಚದ ಬೇಡಿಕೆ ಮಂಡಿಸುತ್ತಾರೆ. ಈ ಲಂಚದ ಮೊತ್ತ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಕೊಡಬೇಕು. ನನಗೆ 20 ಸಾವಿರ ರೂ. ಅಷ್ಟೇ ಎಂದೂ ಪಿಡಿಒ ಹಾಗೂ ಸದಸ್ಯ ಲಂಚದ ವಿವರಣೆ ಕೊಟ್ಟಿದ್ದಾರೆ. ನೀರಗಂಟಿ ಹುದ್ದೆಗೆ ಹೀಗೆ ಲಂಚದ ಡೀಲಿಂಗ್ ರಾಜರೋಷವಾಗಿ ನಡೆದಿರುವ ಪಿಡಿಒ ಡೀಲಿಂಗ್ ಅಡಿಯೋ ಈಗ ಜಿಲ್ಲೆಯಲ್ಲಿ ವೈರಲ್ ಆಗುತ್ತಿದೆ.