ಮೈಸೂರು: ವಿವೇಕಾನಂದ ಸ್ಮಾರಕಕ್ಕೆ ಆಮ್ ಆದ್ಮಿ ಪಾರ್ಟಿಯ ವಿರೋಧವಿಲ್ಲ. ಆದರೆ ಐತಿಹಾಸಿಕ ಮಹತ್ವವುಳ್ಳ ಎನ್‌ಟಿಎಂ ಶಾಲೆ ಕೆಡವುದಕ್ಕೆ ನಮ್ಮ ವಿರೋಧವಿದೆ ಎಂದು ಪಕ್ಷದ ಮೈಸೂರು ಜಿಲ್ಲಾ ಸಂಚಾಲಕಿ ಮಾಲವಿಕ ಗುಬ್ಬಿವಾಣಿ ತಿಳಿಸಿದ್ದಾರೆ.
ಶನಿವಾರ ನಗರದ ಎನ್‌ಟಿಎಂ ಶಾಲೆ ಆವರಣದಲ್ಲಿ ಆಮ್ ಆದ್ಮಿ ಪಾರ್ಟಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ವಿವೇಕಾನಂದ ಸ್ಮಾರಕವನ್ನು ಶಾಲೆಯ ಆವರಣದಲ್ಲಿರುವ ಮಿಕ್ಕ ಸ್ಥಳದಲ್ಲಿ ಕಟ್ಟಬಹುದು. ಯುವ ಸಭಾಂಗಣ ಬೇರೆ ಎಲ್ಲಿಯಾದರೂ ಕಟ್ಟಬಹುದು. ಅದನ್ನು ಬಿಟ್ಟು ಶಾಲೆ ಕೆಡವಿ ಸ್ಮಾರಕ ನಿರ್ಮಿಸಲು ಹೊರಟಿರುವುದ ಸರಿಯಲ್ಲ ಎಂದು ಹೇಳಿದರು.
ಇನ್ನು ಸಾಮಾಜಿಕ ಬದಲಾವಣೆ ಕೇವಲ ಶಿಕ್ಷಣದಿಂದ ಮಾತ್ರ ಸಾಧ್ಯವಾಗಿದ್ದು ಸಭಾಂಗಣದಿಂದ ಆಗಿಲ್ಲ ಎಂದ ಅವರು, ಸರಕಾರ ಸರಕಾರಿ ಶಾಲೆಗಳನ್ನು ಸರಿಯಾಗಿ ನಡೆಸಲಾಗದೆ, ಬೇಕೆಂತಲೇ ಪರಿಸ್ಥಿತಿ ಬಿಗಡಾಯಿಸಲು ಬಿಟ್ಟು, ಶಾಲೆಯ ಅಮೂಲ್ಯ ಜಾಗವನ್ನು ಹಿತಾಸಕ್ತಿಗಳ ವಶವಾಗಲು ಬಿಟ್ಟಂತೆ ತೋರುತ್ತಿದೆ ಎಂದು ದೂರಿದರು.
ಶಿಕ್ಷಣ ಕ್ಷೇತ್ರದಲ್ಲಿ ಸಾಧಿಸುವುದು ಬೇಕಾದಷ್ಟು ಇರುವಾಗ ಶಾಲೆಗಳನ್ನು ಮುಚ್ಚುವುದು ತೀವ್ರ ಹಿನ್ನಡೆ. ಶಾಲೆಗಳನ್ನು ಮುಚ್ಚುವುದರಿಂದ ಸರಕಾರ ತನ್ನ ವೈಫಲ್ಯವನ್ನು ಒಪ್ಪಿಕೊಂಡಂತೆಯೇ ಸರಿ. ಹೊಸ ಶಾಲೆ ತೆರೆಯುವ ಮಾತಿರಲಿ, ಇರುವ ಶಾಲೆಗಳನ್ನು ಮುಚ್ಚುವುದರಲ್ಲಿ ಸರಕಾರ ತೋರುತ್ತಿರುವ ಉತ್ಸಾಹ ಬಿಜೆಪಿ ಸರಕಾರಕ್ಕೆ ಮಕ್ಕಳ ಶಿಕ್ಷಣ ಆದ್ಯತೆಯೂ ಅಲ್ಲ, ಅವಶ್ಯಕತೆಯೂ ಅಲ್ಲ ಎಂದು ಸಾರುವ ನೀತಿಯಾಗಿರುವುದು ದುರಾದೃಷ್ಟಕರ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ಐತಿಹಾಸಿಕ ಎನ್‌ಟಿಎಂ ಶಾಲೆಯನ್ನು ಕೆಡವುದರ ವಿರುದ್ಧ ಪ್ರತಿಭಟಿಸುತ್ತಿದ್ದು ಮುಂದೆಯೂ ಸರಕಾರದ ಇಂತಹ ನೀತಿಯ ವಿರುದ್ಧ ಪ್ರತಿಭಟನೆ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಪಕ್ಷದ ಆರ್.ಪ್ರಸಾದ್, ಮೊಹಮ್ಮದ್ ಇಸ್ಮೈಲ್, ಶಿವಕುಮಾರ್, ನಸ್ರೀನ್ ತಾಜ್, ಕೆ.ಎಂ.ಶಿವಕುಮಾರ್ ಮತ್ತು ಹಲವು ಕಾರ್ಯಕರ್ತರು ಭಾಗವಹಿಸಿದ್ದರು.